
ಲಖನೌ: ಸಮಾಜವಾದಿ ಪಕ್ಷದ ಅಧಿಕೃತ 'ಎಕ್ಸ್' ಖಾತೆಯಲ್ಲಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರನ್ನು ಗುರಿಯಾಗಿಸಿಕೊಂಡು ಆಕ್ಷೇಪಾರ್ಹ ಪೋಸ್ಟ್ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು, ತಮ್ಮ ಜನರಿಂದ ಮತ್ತೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭಾನುವಾರ ಭರವಸೆ ನೀಡಿದ್ದಾರೆ.
ಆದರೆ ಪಾಠಕ್ ಅವರು ಅಂತಹ ಪೋಸ್ಟ್‌ಗೆ ಕಾರಣವಾದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸುತ್ತಾರೆ ಎಂದು ಆಶಿಸುವುದಾಗಿ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಹಿಂದಿಯಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಅಖಿಲೇಶ್ ಯಾದವ್ ಅವರು, 'ಯುಪಿ ಉಪಮುಖ್ಯಮಂತ್ರಿಯ ಕುರಿತಾದ ಕಾಮೆಂಟ್ ಅನ್ನು ಗಮನಿಸಿದ್ದು, ನಾವು ಪಕ್ಷದ ಮಟ್ಟದಲ್ಲಿ ವಿವರಣೆಯನ್ನು ಕೇಳಿದ್ದೇವೆ ಮತ್ತು ಇದು ಮತ್ತೆ ಸಂಭವಿಸುವುದಿಲ್ಲ ಎಂದು ನಾವು ಅವರಿಂದ ಭರವಸೆ ಪಡೆದಿದ್ದೇನೆ. 'ಸಮಾಜವಾದಿಗಳ ಡಿಎನ್‌ಎ' ಕುರಿತು ನಿಮ್ಮ(ಪಾಠಕ್) ಅಸಭ್ಯ ಹೇಳಿಕೆಯಿಂದ ಆಕ್ರೋಶಗೊಂಡು ಅವರು ಈ ರೀತಿ ಮಾಡಿದ್ದಾರೆ. ಆದರೆ ನೀವು ನಿರಂತರವಾಗಿ ನೀಡುವ ಈ ರೀತಿಯ ಹೇಳಿಕೆಗಳು ಸಹ ನಿಲ್ಲುತ್ತವೆ ಎಂದು ನಾವು ಭಾವಿಸುತ್ತೇವೆ' ಎಂದಿದ್ದಾರೆ.
'ಆರೋಗ್ಯ ಸಚಿವರಾಗಿ, ಯಾರೊಬ್ಬರ ಡಿಎನ್‌ಎ ಬಗ್ಗೆ ಕೊಳಕು ಮಾತನಾಡುವುದು, ಒಬ್ಬ ವ್ಯಕ್ತಿಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ನಾವು ಶ್ರೀಕೃಷ್ಣನಿಗೆ ಸಂಬಂಧಿಸಿದ ಯದುವಂಶಿಗಳಾಗಿರುವುದರಿಂದ, ನಮ್ಮ ಡಿಎನ್‌ಎ ಮೇಲಿನ ನಿಮ್ಮ ದಾಳಿಯು ನಮಗೆ ಧಾರ್ಮಿಕವಾಗಿ ನೋವುಂಟು ಮಾಡುತ್ತದೆ' ಎಂದು ಅಖಿಲೇಶ್ ಯಾದವ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ರಾಜಕೀಯ ಮಾಡುವಾಗ ಪಾಠಕ್ ತಮ್ಮ ನೈತಿಕತೆಯನ್ನು ಮರೆಯಬಾರದು ಎಂದು ಅಖಿಲೇಶ್ ಯಾದವ್ ತಿರುಗೇಟು ನೀಡಿದ್ದಾರೆ.
Advertisement