
ನವದೆಹಲಿ: ವಿದೇಶಗಳಿಗೆ ತೆರಳುವ ಸರ್ವಪಕ್ಷಗಳ ರಾಜತಾಂತ್ರಿಕ ನಿಯೋಗಕ್ಕೆ ತಮ್ಮ ಸದಸ್ಯರ ಹೆಸರು ನೀಡುವಂತೆ ಕೇಳಿಲ್ಲ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಹೇಳಿಕೆ "ಸಂಪೂರ್ಣ ಸುಳ್ಳು" ಎಂದು ಕಾಂಗ್ರೆಸ್ ಸೋಮವಾರ ತಳ್ಳಿಹಾಕಿದೆ ಮತ್ತು ವಿರೋಧ ಪಕ್ಷ ಆಯ್ಕೆ ಮಾಡಿದ ಹೆಸರುಗಳನ್ನು ಅನುಮೋದಿಸದಿರುವುದು "ಕೀಳುಮಟ್ಟದ ರಾಜಕೀಯ" ಎಂದು ಟೀಕಿಸಿದೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್, ಆಸ್ಟ್ರೇಲಿಯಾ, ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಚೀನಾದಂತಹ ದೇಶಗಳಲ್ಲಿ ಕಾಂಗ್ರೆಸ್ ಅನ್ನು ಸಾರ್ವಜನಿಕವಾಗಿ ನಿಂದಿಸಿದ್ದ ಮೋದಿ ಈಗ ನಿಯೋಗಗಳಲ್ಲಿ ವಿರೋಧ ಪಕ್ಷದ ಸಹಾಯ ಪಡೆಯುತ್ತಿದ್ದಾರೆ ಎಂದರು.
"ಪ್ರಧಾನಿಯವರು ಫೋನ್ ಎತ್ತಿಕೊಂಡು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಏಕೆ ಮಾತನಾಡಲಿಲ್ಲ? ಅದನ್ನು ಮಾಡುವ ಸೌಜನ್ಯ ಅವರಿಗೆ ಏಕೆ ಇಲ್ಲ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
11 ವರ್ಷಗಳ ಕಾಲ ವಿರೋಧ ಪಕ್ಷಗಳನ್ನು - ವಿಶೇಷವಾಗಿ ಕಾಂಗ್ರೆಸ್ ಅನ್ನು - ನಿಂದಿಸಿ ಮತ್ತು ಮಾನಹಾನಿ ಮಾಡಿದ ನಂತರ, ಪ್ರಧಾನಿ ಈಗ ಸರ್ವಪಕ್ಷ ನಿಯೋಗವನ್ನು ವಿದೇಶಗಳಿಗೆ ಕಳುಹಿಸುತ್ತಿದ್ದಾರೆ. ಸತ್ಯವೆಂದರೆ ಸ್ವದೇಶದಲ್ಲಿ ಬಿಜೆಪಿಯ ವಿಷಕಾರಿ ರಾಜಕೀಯವು ನಮ್ಮನ್ನು ವಿದೇಶಗಳಲ್ಲಿ ಭಾರಿ ನಷ್ಟಕ್ಕೆ ತಳ್ಳಿದೆ. ನಮ್ಮ ಪವಿತ್ರ ರಾಜತಾಂತ್ರಿಕತೆ ನೆಲಕಚ್ಚಿದೆ ಮತ್ತು ಭಾರತವು ಪಾಕಿಸ್ತಾನದೊಂದಿಗೆ ಮತ್ತೆ ಸಂಪರ್ಕ ಕಡಿತಗೊಂಡಿದೆ" ಎಂದು ಜೈರಾಮ್ ರಮೇಶ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಸ್ವ-ಘೋಷಿತ ವಿಶ್ವಗುರುವಿನ ಹಾಟ್ ಬಲೂನ್" ಈಗ ನಿಜವಾಗಿಯೂ ಪಂಕ್ಚರ್ ಮಾಡಲಾಗಿದೆ ಎಂದು ಜೈರಾಮ್ ರಮೇಶ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ವಿದೇಶಗಳಿಗೆ ತೆರಳುವ ಸರ್ವಪಕ್ಷಗಳ ರಾಜತಾಂತ್ರಿಕ ನಿಯೋಗಕ್ಕೆ ತಮ್ಮ ಸದಸ್ಯರ ಹೆಸರು ನೀಡುವಂತೆ ಕಾಂಗ್ರೆಸ್ ಗೆ ಕೇಳಿಲ್ಲ. ಪ್ರಮುಖ ನಾಯಕರನ್ನಷ್ಟೇ ಸೌಜನ್ಯಕ್ಕೆ ಕರೆದಿದೆ ಎಂದು ಕಿರಣ್ ರಿಜಿಜು ಹೇಳಿದ್ದರು.
Advertisement