
ಚಂಡೀಗಢ: ಆಪರೇಷನ್ ಸಿಂಧೂರ್ ಕುರಿತು ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಅಶೋಕ ವಿಶ್ವವಿದ್ಯಾಲಯದ ಅಸೋಸಿಯೇಟ್ ಪ್ರೊಫೆಸರ್ ಅಲಿ ಖಾನ್ ಮಹ್ಮುದಾಬಾದ್ ಅವರನ್ನು ಸೋನೆಪತ್ ನ್ಯಾಯಾಲಯ ಮಂಗಳವಾರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪರೇಷನ್ ಸಿಂಧೂರ್ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ ಆರೋಪದ ಮೇಲೆ ಅಲಿ ಖಾನ್ ಅವರನ್ನು ಭಾನುವಾರ ದೆಹಲಿಯಲ್ಲಿ ಬಂಧಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಆರೋಪಿಯನ್ನು ಸೋನೆಪತ್‌ನ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್, ಅಲಿ ಖಾನ್ ಅವರನ್ನು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ.
ಅಸೋಸಿಯೇಟ್ ಪ್ರೊಫೆಸರ್ ಅಲಿ ಖಾನ್ ಮಹ್ಮುದಾಬಾದ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಬಿಜೆಪಿ ಯುವ ಮೋರ್ಚಾದ ನಾಯಕರೊಬ್ಬರ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ಅಲಿ ಖಾನ್ ಮಹ್ಮುದಾಬಾದ್ ಅಶೋಕ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದರು. ಹರಿಯಾಣ ರಾಜ್ಯ ಮಹಿಳಾ ಆಯೋಗವು ಇತ್ತೀಚೆಗೆ ಸಹಾಯಕ ಪ್ರಾಧ್ಯಾಪಕರಿಗೆ ನೋಟಿಸ್ ನೀಡಿತ್ತು.
ಫೇಸ್‌ಬುಕ್ ಪೋಸ್ಟ್ ಸಂಬಂಧ ಅಲಿ ಖಾನ್ ಅವರಿಗೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ಸಮನ್ಸ್ ಜಾರಿ ಮಾಡಿತ್ತು.
ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ಅವರು, ಅಲಿ ಖಾನ್ ಹೇಳಿಕೆಗಳು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ಸಿಂಗ್ ಸೇರಿದಂತೆ ಸಮವಸ್ತ್ರದಲ್ಲಿರುವ ಮಹಿಳೆಯರನ್ನು ಅವಹೇಳನ ಮಾಡಿದಂತೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಲ್ಲಿ ವೃತ್ತಿಪರ ಅಧಿಕಾರಿಗಳಾಗಿರುವ ಅವರ ಪಾತ್ರವನ್ನು ದುರ್ಬಲಗೊಳಿಸಿದಂತೆ ಎಂದು ಆರೋಪಿಸಿದ್ದರು.
Advertisement