
ನವದೆಹಲಿ: "ತ್ರಿಪಕ್ಷೀಯ" ಸಹಕಾರವನ್ನು ಹೆಚ್ಚಿಸುವ ವಿಶಾಲ ಪ್ರಯತ್ನಗಳ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಸಿದ್ಧತೆ ನಡೆಸಲಾಗಿದ್ದು, ಮೂರು ದೇಶಗಳ ವಿದೇಶಾಂಗ ಮಂತ್ರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ rediff ವರದಿ ಮೂಲಕ ತಿಳಿದುಬಂದಿದೆ.
ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಅವರ ಪಾಕಿಸ್ತಾನಿ ವಿದೇಶಾಂಗ ಸಚಿವ ಇಶಾಕ್ ದಾರ್ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ನಡುವಿನ ಸಭೆಯ ನಂತರ ಸಿಪಿಇಸಿ ವಿಸ್ತರಣೆಯ ಘೋಷಣೆ ಮಾಡಲಾಗಿದೆ ಎಂದು ಪಾಕಿಸ್ತಾನದ ಹೇಳಿಕೆಯನ್ನು ಉಲ್ಲೇಖಿಸಿ rediff ವರದಿ ಮಾಡಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಸಿಪಿಇಸಿಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಯೋಜನೆಯು ಸಿಪಿಇಸಿಯನ್ನು ಒಳಗೊಂಡಿರುವುದರಿಂದ ಚೀನಾದ ಬೆಲ್ಟ್ ಆಂಡ್ ರೋಡ್ ಉಪಕ್ರಮವನ್ನು ಭಾರತ ಕೂಡ ವಿರೋಧಿಸುತ್ತಿದೆ.
ಮಧ್ಯಂತರ ತಾಲಿಬಾನ್ ಸರ್ಕಾರ ಇತ್ತೀಚೆಗೆ ಭಾರತದೊಂದಿಗೆ ಉತ್ತಮ ಸಂಬಂಧವನ್ನು ವೃದ್ಧಿಗೊಳಿಸಿಕೊಳ್ಳಲು ಯತ್ನಿಸುತ್ತಿದೆ. ಇದರ ಭಾಗವಾಗಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬೆನ್ನಲ್ಲೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಕೆಲವು ದಿನಗಳ ನಂತರ ತ್ರಿಪಕ್ಷೀಯ ಸಭೆ ನಡೆದಿದೆ.
ಪಾಕಿಸ್ತಾನದ ವಿರುದ್ಧ ಯುದ್ಧ ನಡೆಸುತ್ತಿರುವ ಅಫ್ಘಾನ್ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪುಗಳ ಮೇಲೆ ದಮನ ಮಾಡಲು ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಮಧ್ಯಂತರ ತಾಲಿಬಾನ್ ಸರ್ಕಾರದ ವಿರುದ್ಧ ನಿರಂತರ ಟೀಕೆಗಳ ಹಿನ್ನೆಲೆಯಲ್ಲಿ ಮೂರು ದೇಶಗಳ ವಿದೇಶಾಂಗ ಮಂತ್ರಿಗಳ ನಡುವಿನ ಸಭೆಯೂ ನಡೆಯಿತು.
ಇವೆಲ್ಲದರ ನಡುವೆ ತ್ರಿಪಕ್ಷೀಯ ಸಭೆಯ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ವಿಚಿತ್ರ ಹೇಳಿಕೆ ನೀಡಿದ್ದಾರೆ. ಬೀಜಿಂಗ್‌ನಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಪಾಕಿಸ್ತಾನದ ಉಪ ಪ್ರಧಾನಿ/ವಿದೇಶಾಂಗ ಸಚಿವ ಇಶಾಕ್ ದಾರ್ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ನಡುವಿನ ಸಭೆಯನ್ನು "ಅನೌಪಚಾರಿಕ" ಎಂದು ಕರೆದ್ದಾರೆ.
ಪಾಕಿಸ್ತಾನವು ಸಾವಿರಾರು ಅಫಘಾನ್ ನಿರಾಶ್ರಿತರನ್ನು ಬಲವಂತವಾಗಿ ವಾಪಸ್ ಕಳುಹಿಸುವ ಬಗ್ಗೆ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಈ ಮೂರು ದೇಶಗಳು ದೀರ್ಘಕಾಲದವರೆಗೆ ತ್ರಿಪಕ್ಷೀಯ ವಿದೇಶಾಂಗ ಮಂತ್ರಿಗಳ ವ್ಯವಸ್ಥೆಯನ್ನು ಹೊಂದಿದ್ದವು.
ತ್ರಿಪಕ್ಷೀಯ ಸಭೆಯ ಕುರಿತು ಚೀನಾದ ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆಯು ವಾಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, ಚೀನಾ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಸಾರ್ವಭೌಮತ್ವ, ಭದ್ರತೆ ಮತ್ತು ರಾಷ್ಟ್ರೀಯ ಘನತೆಯನ್ನು ಕಾಪಾಡುವಲ್ಲಿ ಬೆಂಬಲಿಸುತ್ತದೆ ಎಂದಷ್ಟೇ ಹೇಳಿದೆ.
ಬೆಲ್ಟ್ ಮತ್ತು ರೋಡ್ ಉಪಕ್ರಮವನ್ನು ಜಂಟಿಯಾಗಿ ನಿರ್ಮಿಸುವಲ್ಲಿ ಮೂರು ಕಡೆಯವರು ಸಹಕಾರವನ್ನು ಹೆಚ್ಚಿಸಬೇಕು, ಅಫ್ಘಾನಿಸ್ತಾನಕ್ಕೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿಸ್ತರಣೆಯನ್ನು ಉತ್ತೇಜಿಸಬೇಕು ಮತ್ತು ಪ್ರಾದೇಶಿಕ ಅಂತರ್ಸಂಪರ್ಕ ಜಾಲಗಳ ನಿರ್ಮಾಣವನ್ನು ಬಲಪಡಿಸಬೇಕು ಎಂದು ಅದು ಹೇಳಿದೆ.
ಮೂರು ದೇಶಗಳು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸಬೇಕು, ಕಾನೂನು ಜಾರಿ ಮತ್ತು ಭದ್ರತಾ ಸಹಕಾರವನ್ನು ಕೈಗೊಳ್ಳಬೇಕು, ಪರಸ್ಪರ ಕಾಳಜಿಯ ಭಯೋತ್ಪಾದಕ ಶಕ್ತಿಗಳನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಈ ಪ್ರದೇಶದ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಬಾಹ್ಯ ಶಕ್ತಿಗಳ ವಿರುದ್ಧ ಜಾಗರೂಕರಾಗಿರಬೇಕು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ದಾರ್ ಅವರ ಬೀಜಿಂಗ್‌ಗೆ ಮೂರು ದಿನಗಳ ಭೇಟಿಯ ಮುಕ್ತಾಯ ದಿನದಂದು ಈ ತ್ರಿಪಕ್ಷೀಯ ಸಭೆ ನಡೆಯಿತು. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಘಟನೆಗೆ ಪ್ರತಿಯಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ನ್ನು ಪ್ರಾರಂಭಿಸಿದ ನಂತರ ಇದು ಮೊದಲ ಉನ್ನತ ಮಟ್ಟದ ಸಂವಾದವಾಗಿದ್ದು ಈ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದುಕೊಂಡಿದೆ.
"ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಪಾಕಿಸ್ತಾನ, ಚೀನಾ ಮತ್ತು ಅಫ್ಘಾನಿಸ್ತಾನ ಒಟ್ಟಾಗಿ ನಿಂತಿವೆ" ಎಂದು ದಾರ್ ಸಭೆಯ ನಂತರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದು ಮೂವರು ನಾಯಕರು ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
Advertisement