
ಶ್ರೀನಗರ: ಆಲಿಕಲ್ಲು ಮಳೆಯಿಂದ ಬುಧವಾರ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದ ಮೂತಿ ಒಡೆದು ಹೋಗಿದ್ದು, ವಿಮಾನದ ನಡುಕಕ್ಕೆ ಪ್ರಯಾಣಿಕರು ಕಂಗಲಾಗಿ ಹೋಗಿದ್ದರು.
220ಕ್ಕೂ ಹೆಚ್ಚು ಜನರನ್ನು ಹೊತ್ತ ಇಂಡಿಯಾ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ಈ ಘಟನೆ ಸಂಭವಿಸಿದ್ದು, ವಿಮಾನವು ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಪ್ರತಿಕೂಲ ಹವಾಮಾನ(ಆಲಿಕಲ್ಲು ಮಳೆ)ದಿಂದಾಗಿ ವಿಮಾನ ತೀವ್ರ ನಡುಕಕ್ಕೆ ಒಳಗಾಗಿದ್ದು, ತಕ್ಷಣ ಪೈಲಟ್ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ "ತುರ್ತುಸ್ಥಿತಿ"ಯ ಬಗ್ಗೆ ವರದಿ ಮಾಡಿದ್ದಾರೆ. ನಂತರ ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ 6E2142 ಕೆಟ್ಟ ಹವಾಮಾನ(ಆಲಿಕಲ್ಲು ಮಳೆ) ಪರಿಸ್ಥಿತಿಯಿಂದಾಗಿ ಪೈಲಟ್ ATC SXR (ಶ್ರೀನಗರ)ಗೆ ತುರ್ತು ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ" ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾನಿಗೀಡಾದ ಈ ವಿಮಾನವು ಸಂಜೆ 6.30 ಕ್ಕೆ ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಿತು ಮತ್ತು ಎಲ್ಲಾ ವಿಮಾನ ಸಿಬ್ಬಂದಿ ಮತ್ತು 227 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement