
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುರುವಾರ ನಡೆದ ಎನ್ ಕೌಂಟರ್ ನಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕಿಶ್ತ್ವಾರ್ ಜಿಲ್ಲೆಯ ಚತ್ರೂವಿನ ಸಿಂಗ್‌ಪೋರಾ ಪ್ರದೇಶದಲ್ಲಿ 4ಉಗ್ರರು ಅಡಗಿ ಕುಳಿತಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು.
ಈ ವೇಳೆ ಉಗ್ರರು ಅಡಗಿದ್ದ ಸ್ಥಳ ಸಮೀಪಿಸುತ್ತಿದ್ದಂತೆಯೇ ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಕೂಡಲೇ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಸೇನಾಪಡೆ ಉಗ್ರರ ದಾಳಿಗೆ ದಿಟ್ಟ ಉತ್ತರ ನೀಡಿದ್ದು, ಉಗ್ರರು ಅಡಗಿರುವ ಪ್ರದೇಶವನ್ನು ಸುತ್ತುವರೆಯಲಾಯಿತು.
ಉಗ್ರರ ನಿರ್ದಿಷ್ಟ ಸ್ಥಳವನ್ನು ಗುರುತಿಸಲು ವೈಮಾನಿಕ ಕಣ್ಗಾವಲುಗಾಗಿ ಡ್ರೋನ್ ಮತ್ತಿತರ ಉಪಕರಣಗಳನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ವೈಟ್ ನೈಟ್ ಕಾರ್ಪ್ಸ್ "ಜಮ್ಮು ಕಾಶ್ಮೀರ ಪೊಲೀಸರೊಂದಿಗೆ ಇಂದು ಬೆಳಗ್ಗೆ ಛತ್ರು, ಕಿಶ್ತ್ವಾರ್‌ನಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರೊಂದಿಗೆ ಎನ್ ಕೌಂಟರ್ ನಡೆದಿದ್ದು, ಉಗ್ರರ ಹತ್ಯೆಗೆ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದೆ.
ಮೇ 16 ರಂದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ, ಭಾರತೀಯ ಸೇನೆ ಕೇಲಾರ್, ಶೋಪಿಯಾನ್ ಮತ್ತು ಟ್ರಾಲ್‌ನಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಉಗ್ರರನ್ನು ಹತ್ಯೆ ಮಾಡಿದ್ದರು.
Advertisement