
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪುರುಷರ ವಿಧವೆ ಪತ್ನಿಯರು ತಮ್ಮ ಗಂಡಂದಿರ ಜೀವಕ್ಕಾಗಿ ಬೇಡಿಕೊಳ್ಳುವ ಬದಲು ಪ್ರತಿದಾಳಿ ನಡೆಸಬೇಕಿತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ರಾಜ್ಯಸಭಾ ಸಂಸದ ರಾಮ್ ಚಂದರ್ ಜಂಗ್ರಾ ನೀಡಿದ್ದಾರೆ.
ದೇವಿ ಅಹಲ್ಯಾಬಾಯಿ ಹೋಳ್ಕರ್ ಜಯಂತಿಯ ಸಂದರ್ಭದಲ್ಲಿ ಭಿವಾನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಜಂಗ್ರಾ, ದಾಳಿ ಸಂದರ್ಭದಲ್ಲಿ ಮಹಿಳೆಯರು ಹೋರಾಡಬೇಕಿತ್ತು. ಅವರು ಹೋರಾಡಿದ್ದರೆ, ಅವರ ಮುಗ್ಧ ಗಂಡಂದಿರನ್ನು ಅವರ ಮುಂದೆ ಗುಂಡು ಹಾರಿಸಿ ಕೊಲ್ಲುತ್ತಿರಲಿಲ್ಲ ಎಂದು ಹೇಳಿದರು.
ಆ ಸಂದರ್ಭದಲ್ಲಿ ಮಹಿಳೆಯರಿಗೆ ಉತ್ಸಾಹ, ಧೈರ್ಯ, ಹೃದಯವಂತಿಕೆ, ತಮ್ಮ ಪತಿಯರ ಬಗ್ಗೆ ಕಾಳಜಿ ನನಗೆ ಕಾಣಲಿಲ್ಲ. ಹೀಗಾಗಿ ಅಳುತ್ತಾ ಕೈಮುಗಿದು ಬೇಡಿಕೊಂಡರು ಎಂದು ಹೇಳಿದ್ದಾರೆ.
ಘಟನೆ ನಡೆದು ಒಂದು ತಿಂಗಳಾದರೂ 26 ನಾಗರಿಕರನ್ನು ಕೊಂದ ಮಾರಕ ದಾಳಿಯ ದುಷ್ಕರ್ಮಿಗಳನ್ನು ಬಂಧಿಸದ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿ ಸಂಸದರು, ನಮ್ಮ ಸೇನೆ ಭಯೋತ್ಪಾದಕರ ಅಡಗುತಾಣಗಳು ಮತ್ತು ಮಾಸ್ಟರ್ ಮೈಂಡ್‌ಗಳನ್ನು ನಾಶಪಡಿಸಿದೆ ಎಂದು ಸಮರ್ಥಿಸಿಕೊಂಡರು.
ಜಾಂಗ್ರಾ ಅವರ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾದವು, ವಿರೋಧ ಪಕ್ಷಗಳು ಅವರ ಹೇಳಿಕೆ ಅಸಹ್ಯಕರ ಮತ್ತು ಮಹಿಳಾ ವಿರೋಧಿ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ರೋಹ್ಟಕ್‌ನ ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ, ಪಹಲ್ಗಾಮ್ ದಾಳಿ ಸಂತ್ರಸ್ತರ ಕುಟುಂಬಗಳನ್ನು ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ ಎಂದು ಆರೋಪಿಸಿದರು.
ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರಿಂದ ಮಹಿಳೆಯರ ಪತಿಯರು ಜೀವಕಳೆದುಕೊಂಡರು, ಈಗ ಹರಿಯಾಣದ ಈ ಬಿಜೆಪಿ ಸಂಸದ ರಾಮಚಂದ್ರ ಅವರ ಘನತೆಯನ್ನು ಹಾಳುಮಾಡಲು ನೋಡುತ್ತಿದ್ದಾರೆ. ಇದು ತುಂಬಾ ಅಸಹ್ಯಕರ ಹೇಳಿಕೆ. ಹುತಾತ್ಮರ ಕುಟುಂಬಗಳನ್ನು ಬಿಜೆಪಿ ನಿರಂತರವಾಗಿ ಅವಮಾನಿಸುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Advertisement