
ಖಾಂಡ್ವಾ: ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಇಬ್ಬರು ಪುರುಷರು, 45 ವರ್ಷದ ಬುಡಕಟ್ಟು ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಖಲ್ವಾ ತಹಸಿಲ್‌ನಲ್ಲಿರುವ ರೋಶ್ನಿ ಪೊಲೀಸ್ ಹೊರಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ತೀವ್ರ ಹಲ್ಲೆ ನಡೆಸಲಾಗಿದ್ದು, ಅವರು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಖಾಂಡ್ವಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ರಾಜೇಶ್ ರಘುವಂಶಿ ಹೇಳಿದ್ದಾರೆ.
"ಖಂಡ್ವಾ ಜಿಲ್ಲಾ ಆಸ್ಪತ್ರೆಯಲ್ಲಿ ವಿಧಿವಿಜ್ಞಾನ ತಜ್ಞರ ನಿಕಟ ನಿಗಾದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ವರದಿ ಬಂದ ನಂತರ ಹೆಚ್ಚಿನ ವಿವರ ಲಭ್ಯವಾಗಲಿದೆ" ಎಂದು ಅವರು ತಿಳಿಸಿದ್ದಾರೆ.
ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಸಂತ್ರಸ್ತೆ ಹಾಗೂ ಆರೋಪಿಗಳು ಕುರ್ಕು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹಿಳೆ ಮತ್ತು ಆರೋಪಿಗಳು ಶುಕ್ರವಾರ ಮದುವೆಯಲ್ಲಿ ಭಾಗವಹಿಸಿದ್ದರು. ಮಹಿಳೆಯ ಕುಟುಂಬದವರು, ಶನಿವಾರ ಬೆಳಗ್ಗೆ ಆರೋಪಿಗಳಲ್ಲಿ ಒಬ್ಬರ ಮನೆಯಿಂದ ಆಕೆಯನ್ನು ತಮ್ಮ ಮನೆಗೆ ಕರೆತಂದಿದ್ದು, ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕೆ ಸಾವನ್ನಪ್ಪಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಎಎಸ್ಪಿ ಹೇಳಿದ್ದಾರೆ.
Advertisement