
ಚೆನ್ನೈ: ಇಲ್ಲಿನ ಇಂಜಂಬಕ್ಕಂನ ವಿಜಿಪಿ ಗೋಲ್ಡನ್ ಬೀಚ್ ಮನರಂಜನೆ ಉದ್ಯಾನವನದಲ್ಲಿ 15 ಮಕ್ಕಳು ಸೇರಿದಂತೆ ಕನಿಷ್ಠ 36 ಜನರು ನೆಲದಿಂದ 150 ಅಡಿ ಎತ್ತರದಲ್ಲಿ ಅಮ್ಯೂಸ್ ಮೆಂಟ್ ರೈಡ್ ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ. ಯಾಂತ್ರಿಕ ವೈಫಲ್ಯದಿಂದ ಈ ರೀತಿ ಆಗಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಬಂದ ನಂತರ ಅವರೆಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
36 ಜನರಿದ್ದ ಅಮ್ಯೂಸ್ ಮೆಂಟ್ ರೈಡ್ ನಲ್ಲಿ ಮೊನ್ನೆ ಸೋಮವಾರ ಸಾಯಂಕಾಲ ಸಂಜೆ 6 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ಅದು ಮೇಲ್ಭಾಗವನ್ನು ತಲುಪಿದ ತಕ್ಷಣ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಹಲವಾರು ಬಾರಿ ಕೂಗಿದರೂ, ನೆಲದ ಮೇಲಿದ್ದ ನಿರ್ವಾಹಕರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ರಕ್ಷಿಸಲ್ಪಟ್ಟ ಮಹಿಳೆಯೊಬ್ಬರು ಹೇಳುತ್ತಾರೆ.
ಉದ್ಯಾನವನದ ಸಿಬ್ಬಂದಿ ಆರಂಭದಲ್ಲಿ ಆವರಣದಲ್ಲಿದ್ದ ಕ್ರೇನ್ ಬಳಸಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು. ಯಂತ್ರವು ಎತ್ತರವನ್ನು ತಲುಪಲು ಸಾಧ್ಯವಾಗದ ಕಾರಣ, ಅಗ್ನಿಶಾಮಕ ಇಲಾಖೆಗೆ ತಿಳಿಸಲಾಯಿತು. 150 ಅಡಿ ಎತ್ತರದವರೆಗೆ ವಿಸ್ತರಿಸಲು ವಿನ್ಯಾಸಗೊಳಿಸಲಾದ ಸ್ಕೈ-ಲಿಫ್ಟ್ ವಾಹನದೊಂದಿಗೆ ರಕ್ಷಣಾ ಘಟಕವು ಆಗಮಿಸಿತು. ಸವಾರಿಯಲ್ಲಿ ಸಿಲುಕಿಕೊಂಡಿದ್ದ ಜನರಲ್ಲಿ ಒಬ್ಬರು ತಮ್ಮ ಸಂಕಷ್ಟವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು.
ಸಂಜೆ 6 ಗಂಟೆ ಸುಮಾರಿಗೆ ರೈಡ್ ಆರಂಭವಾಗಿ ರಾತ್ರಿ 8:30 ಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದರು. ವಿಜಿಪಿ ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಟಿವಿ ಚಾನೆಲ್ ಒಂದಕ್ಕೆ ಪಾರ್ಥಿಸೆಲ್ವಂ ಹೇಳಿದರು.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ, ಸ್ಥಳದಲ್ಲಿದ್ದ ಸಂಗೀತಾ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ನಮ್ಮ ಗುಂಪು ಅವರಿಗಿಂತ ಸ್ವಲ್ಪ ಮೊದಲು ಅದೇ ರೈಡ್ ನ್ನು ಮುಗಿಸಿತು. ನಮ್ಮ ಗುಂಪು ರೈಡ್‌ನಲ್ಲಿದ್ದಾಗಲೂ, ಅದು ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡಿತ್ತು ಎಂದು ಹೇಳಿದರು.
ರಕ್ಷಿಸಲ್ಪಟ್ಟವರಲ್ಲಿ ಒಬ್ಬರು ಮೇಲ್ಭಾಗದಲ್ಲಿ ಉಸಿರಾಡಲು ಸ್ವಲ್ಪ ಕಷ್ಟವಾಯಿತು ಎಂದು ಹೇಳಿದರು. ಎಲ್ಲರನ್ನೂ ಕಾಪಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಪೊಲೀಸರ ಆರಂಭಿಕ ತನಿಖೆಯು ರೈಡ್ ನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಮತ್ತು ಯಾಂತ್ರಿಕ ಸಮಸ್ಯೆಗಳಿದ್ದು ಅವುಗಳನ್ನು ನಿರ್ಲಕ್ಷಿಸಿರಬಹುದು ಎಂದು ಹೇಳುತ್ತಾರೆ.
Advertisement