
ಮುಂಬೈ: ದೇಶದಲ್ಲಿ ದಾಖಲೆಯ ನಿರುದ್ಯೋಗ ಇದೆ ಮತ್ತು ವಿದೇಶಿ ಹೂಡಿಕೆ ಕ್ಷೀಣಿಸುತ್ತಿದೆ. ಆದರೂ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವತ್ತಿರುವುದು ಹೇಗೆ? ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವತ್ ಬುಧವಾರ ಪ್ರಶ್ನಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾವತ್, 85 ಕೋಟಿ ಜನ ಬಡವರಿದ್ದಾರೆ. ಅವರು ಇನ್ನೂ ಉಚಿತ ಆಹಾರ ಧಾನ್ಯಗಳನ್ನು ಅವಲಂಬಿಸಿದ್ದಾರೆ. "ಇಂದಿಗೂ ಪ್ರಧಾನಿ ಮೋದಿ 85 ಕೋಟಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಬೇಕಾದ ದೇಶದಲ್ಲಿ, ನಿರುದ್ಯೋಗವು ಅತ್ಯುನ್ನತ ಮಟ್ಟದಲ್ಲಿದೆ ಮತ್ತು ವಿದೇಶಿ ಹೂಡಿಕೆ ನಿಂತು ಹೋಗಿದೆ. ಆದರೂ ನಾವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದು ನೀವು ಯಾವ ಆಧಾರದ ಮೇಲೆ ಹೇಳುತ್ತಿದ್ದೀರಿ? ಇದನ್ನು ಸ್ವಲ್ಪ ವಿವರಿಸಿ" ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಕಳೆದ ಶುಕ್ರವಾರ ಸಂಜೆ, 'ವಿಕ್ಷಿತ್ ಭಾರತಕ್ಕಾಗಿ 2047' ಕುರಿತು 10ನೇ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸಿಇಒ ಸುಬ್ರಹ್ಮಣ್ಯಂ ಅವರು, ಭಾರತ, ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಹೇಳಿದರು. ಅಂತರರಾಷ್ಟ್ರೀಯ ಹಣಕಾಸು ನಿಧಿಯ ದತ್ತಾಂಶವನ್ನು ಉಲ್ಲೇಖಿಸಿ, ನೀತಿ ಆಯೋಗದ ಸಿಇಒ ಭಾರತದ ಆರ್ಥಿಕತೆಯು 4 ಟ್ರಿಲಿಯನ್ ಡಾಲರ್ ಗಡಿಯನ್ನು ತಲುಪಿದೆ ಎಂದು ಹೇಳಿದ್ದಾರೆ.
ಮಂಗಳವಾರ ಗುಜರಾತ್ ನ ಗಾಂಧಿನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆರ್ಥಿಕತೆಯ ಏಣಿಯಲ್ಲಿ ಒಂದು ಹಂತ ಮೇಲಕ್ಕೆ ಏರಲು ಒತ್ತಡ ಹೆಚ್ಚಿದೆ ಮತ್ತು ಭಾರತ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗುವ ಉತ್ಸಾಹದಲ್ಲಿ ಎಂದು ಹೇಳಿದ್ದರು.
Advertisement