
ಚೆನ್ನೈ: ಡಿಎಂಕೆ ಪಕ್ಷವು ಮಕ್ಕಳ್ ನೀಧಿ ಮೈಯಂ ಪಕ್ಷಕ್ಕೆ ಒಂದು ರಾಜ್ಯಸಭಾ ಸ್ಥಾನವನ್ನು ಹಂಚಿಕೆ ಮಾಡಿದ್ದು, ಅದರ ಸಂಸ್ಥಾಪಕ ಮತ್ತು ನಟ ಕಮಲ್ ಹಾಸನ್ ಅವರನ್ನು ಸಂಸತ್ತಿನ ಮೇಲ್ಮನೆಗೆ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.
"ಮಕ್ಕಳ್ ನೀಧಿ ಮೈಯಂ ಪಕ್ಷದಿಂದ ಕಮಲ್ ಹಾಸನ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲು ನಾವು ನಿರ್ಣಯ ಅಂಗೀಕರಿಸಿದ್ದೇವೆ" ಎಂದು ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ನಾಯಕ ಮುರಳಿ ಅಪ್ಪಾಸ್ ಅವರು ಹೇಳಿದ್ದಾರೆ.
ಇದಲ್ಲದೆ, ಜೂನ್ 19 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಡಿಎಂಕೆ ಒಕ್ಕೂಟವು ತನ್ನ ಮೂವರು ಅಭ್ಯರ್ಥಿಗಳನ್ನು ಹೆಸರಿಸಿದೆ.
ಡಿಎಂಕೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಸಲ್ಮಾ, ಅಡ್ವೊಕೇಟ್ ಪಿ ವಿಲ್ಸನ್ ಮತ್ತು ಎಸ್‌ಆರ್ ಶಿವಲಿಂಗಂ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ, ರಾಜ್ಯಸಭಾ ಸ್ಥಾನವನ್ನು ಪಡೆಯಲು ಪ್ರತಿ ಅಭ್ಯರ್ಥಿಗೆ ಕನಿಷ್ಠ 34 ಮತಗಳು ಬೇಕಾಗುತ್ತವೆ. 158 ಶಾಸಕರನ್ನು ಹೊಂದಿರುವ ಡಿಎಂಕೆ ನೇತೃತ್ವದ ಇಂಡಿಯಾ ಬಣ(ಡಿಎಂಕೆ: 133, ಕಾಂಗ್ರೆಸ್: 17, ವಿಸಿಕೆ: 4, ಸಿಪಿಐ: 2, ಸಿಪಿಎಂ: 2) ನಾಲ್ಕು ಸ್ಥಾನಗಳನ್ನು ಆರಾಮವಾಗಿ ಗೆಲ್ಲುವ ನಿರೀಕ್ಷೆಯಿದೆ.
Advertisement