
ಹೈದರಾಬಾದ್: ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸಿವೆ ಮತ್ತು ಪ್ರಯತ್ನಿಸುತ್ತಲೇ ಇವೆ ಎಂದು ಬಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ ಪಕ್ಷದಲ್ಲಿರುವ ತಮ್ಮ ವಿರೋಧಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಸಹೋದರ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಈ ವಿಲೀನ ಪ್ರಸ್ತಾಪವನ್ನು ಜೈಲಿನಲ್ಲಿದ್ದಾಗ ತಮ್ಮ ಬಳಿಗೆ ತರಲಾಗಿತ್ತು. ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದೆ, ನನ್ನನ್ನು ಬದಿಗೆ ಸರಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಕಳೆದ ತಿಂಗಳು ವಾರಂಗಲ್‌ನಲ್ಲಿ ನಡೆದ ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ಬೆಳ್ಳಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಅವರು ಮಾಡಿದ ಭಾಷಣದಲ್ಲಿ ಬಿಜೆಪಿಯನ್ನು ಸಾಕಷ್ಟು ಟೀಕಿಸಲಿಲ್ಲ ಮತ್ತು ಭವಿಷ್ಯದಲ್ಲಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು ಎಂದು ತಮ್ಮ ತಂದೆ ಮತ್ತು ಮಾಜಿ ತೆಲಂಗಾಣ ಮುಖ್ಯಮಂತ್ರಿಗೆ ಬರೆದ ಖಾಸಗಿ ಪತ್ರವನ್ನು ಪಕ್ಷದೊಳಗಿನ ಕೆಲವರು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿದ್ದಾರೆ ಎಂದು ಕವಿತಾ ದೂರಿದ್ದಾರೆ.
ಸಾಮಾಜಿಕ ಮಾಧ್ಯಮ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ತಮಗೆ ಅಪಖ್ಯಾತಿ ತರಲು ಯತ್ನಿಸುತ್ತಿದ್ದಾಗ ಪಕ್ಷದ ನಾಯಕರು (ಕೆಸಿಆರ್ ಹೊರತುಪಡಿಸಿ) ತಮ್ಮನ್ನು ರಕ್ಷಿಸಲು ಬಾರದಿದ್ದಕ್ಕಾಗಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಸಂಪನ್ಮೂಲಗಳನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿಯನ್ನು ನಿಯಂತ್ರಿಸುವ ಬದಲು, ಬಿಆರ್‌ಎಸ್ ಅನ್ನು ಬಿಜೆಪಿಗೆ ಒಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ನಾನು ಜೈಲಿನಲ್ಲಿದ್ದಾಗ, ಅದೇ ಪ್ರಸ್ತಾಪವನ್ನು ನನ್ನ ಬಳಿಗೆ ತರಲಾಗಿತ್ತು. ನಾನು ದೃಢವಾಗಿ ತಿರಸ್ಕರಿಸಿದ್ದೆ. ಬಿಆರ್‌ಎಸ್ ತೆಲಂಗಾಣ ಜನರಿಗೆ ಶ್ರೀರಾಮ ರಕ್ಷೆ ಇದ್ದಂತೆ ಎಂದು ಅವರು ಹೇಳಿದ್ದಾರೆ.
ಪಕ್ಷದಲ್ಲಿ ಕೆಲವು ಪಿತೂರಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದರು. ಕೆಸಿಆರ್ ಕೆಲವು ದೆವ್ವಗಳಿಂದ ಸುತ್ತುವರೆದಿರುವ ದೇವರಂತೆ. ಬಿಆರ್‌ಎಸ್ ತೆಲಂಗಾಣಕ್ಕೆ ಚೈತನ್ಯದ ಮತ್ತು ರಾಜ್ಯದ ಅಸ್ತಿತ್ವದ ಮೂಲ ಕಾರಣವಾದ ಪಕ್ಷವಾಗಿದೆ. ಇದನ್ನು ರಾಷ್ಟ್ರೀಯ ಪಕ್ಷದೊಂದಿಗೆ ವಿಲೀನಗೊಳಿಸಬಾರದೆಂದು ತಂದೆ ಕೆಸಿಆರ್‌ಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
Advertisement