

ನವದೆಹಲಿ: ಅಶ್ಲೀಲ ಚಿತ್ರಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸಲು ತಾನು ಒಲವು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಸೆಪ್ಟೆಂಬರ್‌ನಲ್ಲಿ ನೇಪಾಳದಲ್ಲಿ ನಡೆದ ಜೆನ್ ಝೀ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, "ಸಾಮಾಜಿಕ ಜಾಲತಾಣಗಳ ನಿಷೇಧದದ ಬಳಿಕ ಯುವಕರು ಭ್ರಷ್ಟ ಆಡಳಿತವನ್ನು ಉರುಳಿಸಲು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿದಾಗ "ನೇಪಾಳದಲ್ಲಿ ನಿಷೇಧದ ವಿರುದ್ಧ ಏನಾಯಿತು ನೋಡಿ" ಎಂದು ಹೇಳಿದೆ.
ಆದಾಗ್ಯೂ, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಭಾಗೀಯ ಪೀಠ ನಾಲ್ಕು ವಾರಗಳ ನಂತರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸುವುದಾಗಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಗವಾಯಿ ನವೆಂಬರ್ 23 ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ.
ಅಶ್ಲೀಲ ಚಿತ್ರಗಳನ್ನು ನೋಡುವುದನ್ನು ತಡೆಯಲು, ವಿಶೇಷವಾಗಿ ಇನ್ನೂ ವಯಸ್ಸನ್ನು ತಲುಪದವರಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಂತಹ ಯಾವುದೇ ವಿಷಯವನ್ನು ನೋಡುವುದನ್ನು ನಿಷೇಧಿಸಲು ರಾಷ್ಟ್ರೀಯ ನೀತಿಯನ್ನು ರೂಪಿಸಲು ಮತ್ತು ಕ್ರಿಯಾ ಯೋಜನೆಯನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿದಾರರು ಮನವಿ ಮಾಡಿದ್ದರು.
"ಡಿಜಿಟಲೀಕರಣದ ನಂತರ, ಎಲ್ಲರೂ ಡಿಜಿಟಲ್ ಆಗಿ ಸಂಪರ್ಕ ಹೊಂದಿದ್ದಾರೆ. ಯಾರು ವಿದ್ಯಾವಂತರು ಅಥವಾ ಅವಿದ್ಯಾವಂತರು ಎಂಬುದು ಮುಖ್ಯವಲ್ಲ. ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯವಿದೆ" ಎಂದು ಅರ್ಜಿದಾರರು ಹೇಳಿದ್ದರು.
ಅಶ್ಲೀಲ ವಸ್ತುಗಳನ್ನು ಪ್ರಚಾರ ಮಾಡುವ "ಶತಕೋಟಿ" ಸೈಟ್‌ಗಳು ಇಂಟರ್ನೆಟ್‌ನಲ್ಲಿ ಲಭ್ಯವಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ ಎಂದು ಅರ್ಜಿದಾರರು ಕೋರ್ಟ್ ಗಮನ ಸೆಳೆದಿದ್ದಾರೆ. "ಕೋವಿಡ್ ಸಮಯದಲ್ಲಿ ಶಾಲಾ ಮಕ್ಕಳು ಡಿಜಿಟಲ್ ಸಾಧನಗಳನ್ನು ಬಳಸಿದ್ದಾರೆ. ಈ ಸಾಧನಗಳಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವುದನ್ನು ತಡೆಯಲು ಯಾವುದೇ ಕಾರ್ಯವಿಧಾನವಿಲ್ಲ." ಎಂದು ಅರ್ಜಿದಾರರು ಹೇಳಿದ್ದರು.
ಆದಾಗ್ಯೂ, ಮಕ್ಕಳು ಏನು ಬ್ರೌಸ್ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಅಥವಾ ಮಕ್ಕಳು ಏನನ್ನು ನೋಡಬಾರದೆಂಬುದನ್ನು ನಿರ್ಬಂಧಿಸುವುದಕ್ಕಾಗಿ ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಲು ಪೋಷಕರು ಅಥವಾ ಮಕ್ಕಳ ಕಾಳಜಿ ವಹಿಸುವವರಿಗೆ ಅನುಮತಿಸುವ ಸಾಫ್ಟ್‌ವೇರ್‌ಗಳಿವೆ. "ಈ ಸಮಸ್ಯೆಯನ್ನು ನಿಭಾಯಿಸಲು ಯಾವುದೇ ಪರಿಣಾಮಕಾರಿ ಕಾನೂನು ಇಲ್ಲ ಮತ್ತು ಅಶ್ಲೀಲ ಚಿತ್ರಗಳನ್ನು ನೋಡುವುದು ವ್ಯಕ್ತಿಗಳು ಹಾಗೂ ಸಮಾಜದ ಮೇಲೆ, ವಿಶೇಷವಾಗಿ 13 ರಿಂದ 18 ವರ್ಷ ವಯಸ್ಸಿನ ಬೆಳೆಯುತ್ತಿರುವ ಮನಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ." ಎಂದು ಅರ್ಜಿದಾರರು ವಾದಿಸಿದ್ದರು.
ಅರ್ಜಿದಾರರು 'ಆಘಾತಕಾರಿ ದತ್ತಾಂಶ' ಎಂದು ಹೇಳಲಾದ ಮಾಹಿತಿಯನ್ನು ಸಹ ಕೋರ್ಟ್ ಎದುರು ಪ್ರಸ್ತುತಪಡಿಸಿದರು, ಇದರಲ್ಲಿ ಮಕ್ಕಳ ಲೈಂಗಿಕ ವಸ್ತುಗಳನ್ನು ಚಿತ್ರಿಸುವಂತಹ 20 ಕೋಟಿಗೂ ಹೆಚ್ಚು ಅಶ್ಲೀಲ ವೀಡಿಯೊಗಳು ಅಥವಾ ಕ್ಲಿಪ್‌ಗಳು ಭಾರತದಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಸರ್ಕಾರ ಈ ಸೈಟ್‌ಗಳ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಅಧಿಕಾರವನ್ನು ಹೊಂದಿದೆ ಎಂದು ಸಹ ಅರ್ಜಿದಾರರು ಕೋರ್ಟ್ ಗೆ ತಿಳಿಸಿದ್ದಾರೆ.
Advertisement