

ರಾಂಚಿ: ಜಾರ್ಖಂಡ್ ನ ಹಜಾರಿಬಾಗ್ ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಭಯಾನಕ ಘಟನೆ ನಡೆದಿದ್ದು, ಆಪರೇಷನ್ ಥಿಯೇಟರ್‌ನಲ್ಲಿ(OT) ಟೇಬಲ್ ನಿಂದ ಬಿದ್ದು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ.
ಮಹಿಳೆ ಕುಟುಂಬವು ಸಾವಿಗೆ ಆಸ್ಪತ್ರೆ ಆಡಳಿತದ ವಿರುದ್ಧ ಬೊಟ್ಟು ಮಾಡುತ್ತಿದ್ದರೆ, ಆಸ್ಪತ್ರೆಯ ಆಡಳಿತವು ರೋಗಿಯ ಕುಟುಂಬದ ವಿರುದ್ಧ ಆರೋಪ ಮಾಡುತ್ತಿದೆ.
ಸ್ವೀಕರಿಸಿದ ಮಾಹಿತಿಯ ಪ್ರಕಾರ, ಭಾನುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ನಂತರ ಚಾಂದನಿ ಕುಮಾರಿಯನ್ನು ಶೇಖ್ ಭಿಖಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಅವರನ್ನು OT ಕೋಣೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು OT ಬೆಡ್ ಮೇಲಿಂದ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು.
ಘಟನೆಯ ನಂತರ, ಅವರ ಕುಟುಂಬ ಸದಸ್ಯರು ಮಹಿಳೆಯನ್ನು ಬಲವಂತವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮಹಿಳೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಘಟನೆಯ ನಂತರ, ಮಹಿಳೆ ಕುಟುಂಬ ಸದಸ್ಯರು ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಗೆ ಹಿಂತಿರುಗಿ ಗದ್ದಲ ಸೃಷ್ಟಿಸಿ, ಆಸ್ಪತ್ರೆ ಆವರಣವನ್ನು ಧ್ವಂಸಗೊಳಿಸಿದರು.
ಘಟನೆಯ ಸಮಯದಲ್ಲಿ ಆಪರೇಷನ್ ಥಿಯೇಟರ್‌ನಲ್ಲಿ ಯಾವುದೇ ವೈದ್ಯರು ಇರಲಿಲ್ಲ ಮತ್ತು ಹೆರಿಗೆಯನ್ನು ನರ್ಸ್‌ಗಳು ಮಾತ್ರ ನಿರ್ವಹಿಸುತ್ತಿದ್ದರು. ಮಹಿಳೆ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ತೀವ್ರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ.
"ಒಟಿಯಲ್ಲಿ ವೈದ್ಯರು ಇದ್ದಿದ್ದರೆ, ಚಾಂದನಿ ಮತ್ತು ಅವರ ಗರ್ಭದಲ್ಲಿದ್ದ ಮಗು ಇಬ್ಬರೂ ಸಾಯುತ್ತಿರಲಿಲ್ಲ" ಎಂದು ಕುಟುಂಬದ ಸದಸ್ಯರೊಬ್ಬರು ಹೇಳಿದ್ದಾರೆ.
ಮತ್ತೊಂದೆಡೆ, ರೋಗಿಯ ಸಹಾಯಕರ ನಿರ್ಲಕ್ಷ್ಯದಿಂದಾಗಿ ಮಹಿಳೆ ಬೆಡ್ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ ಎಂದು ಹಜಾರಿಬಾಗ್ ಸಿವಿಲ್ ಸರ್ಜನ್ ಹೇಳಿದ್ದಾರೆ.
“ಮಹಿಳಾ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಆಕೆಗೆ ಹೆರಿಗೆ ಮಾಡಿಸಬೇಕಿತ್ತು. ಈ ಮಧ್ಯೆ, ಆಕೆಯ ಸಹಾಯಕರು ಆಕೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಆಕೆ ಮೇಜಿನಿಂದ ಕೆಳಗೆ ಬಿದ್ದರು. ನಂತರ ಕುಟುಂಬ ಸದಸ್ಯರು ಆಕೆಯನ್ನು ಬಲವಂತವಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ” ಎಂದು ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಹೇಳಿದ್ದಾರೆ.
“ಮಹಿಳೆಯ ಕುಟುಂಬವು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯದಿದ್ದರೆ, ಆಕೆಯ ಜೀವ ಉಳಿಸಬಹುದಿತ್ತು” ಎಂದು ಅವರು ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಮಹಿಳೆಯ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲಿಲ್ಲ ಮತ್ತು ಮೃತ ದೇಹವನ್ನು ಮನೆಗೆ ಕೊಂಡೊಯ್ದರು ಎಂದು ಸಿವಿಲ್ ಸರ್ಜನ್ ಹೇಳಿದ್ದಾರೆ.
Advertisement