

ನವದೆಹಲಿ: ನೆಹರು-ಗಾಂಧಿ ರಾಜವಂಶದ ಪ್ರಭಾವವು ರಾಜಕೀಯದ ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಹೇಳಿದ್ದಾರೆ.
"ದಶಕಗಳಿಂದ, ಒಂದು ಕುಟುಂಬವು ಭಾರತೀಯ ರಾಜಕೀಯದ ಮೇಲೆ ಪ್ರಾಬಲ್ಯ ಸಾಧಿಸಿದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು, ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ಪ್ರಸ್ತುತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ನೆಹರು-ಗಾಂಧಿ ರಾಜವಂಶದ ಪ್ರಭಾವವು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದೊಂದಿಗೆ ಸಂಬಂಧ ಹೊಂದಿದೆ. ಆದರೆ ರಾಜಕೀಯ ನಾಯಕತ್ವವು ಜನ್ಮಸಿದ್ಧ ಹಕ್ಕು ಎಂಬ ಕಲ್ಪನೆಯನ್ನು ಅದು ಗಟ್ಟಿಗೊಳಿಸಿದೆ. ಈ ಕಲ್ಪನೆಯು ಪ್ರತಿಯೊಂದು ಪಕ್ಷದಲ್ಲಿ, ಪ್ರತಿಯೊಂದು ಪ್ರದೇಶದಲ್ಲಿ ಮತ್ತು ಪ್ರತಿಯೊಂದು ಹಂತದಲ್ಲೂ ಭಾರತೀಯ ರಾಜಕೀಯದಲ್ಲಿ ಬೇರೂರಿದೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ತಿಳಿಸಿದ್ದಾರೆ.
ಕುಟುಂಬ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ ಎಂದ ತರೂರ್, ಮಹಾರಾಷ್ಟ್ರದಲ್ಲಿ, ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ನಾಯಕತ್ವವನ್ನು ತಮ್ಮ ಮಗ ಉದ್ಧವ್‌ಗೆ ಹಸ್ತಾಂತರಿಸಿದರು, ಅವರು ಈಗ ಆದಿತ್ಯಗೆ ಹಸ್ತಾಂತಿರಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ನಂತರ ಅವರ ಮಗ ಅಖಿಲೇಶ್ ಯಾದವ್, ಈಗ ಸಂಸದ ಮತ್ತು ಪಕ್ಷದ ಅಧ್ಯಕ್ಷರಾಗಿದ್ದಾರೆ. ಅದೇ ರೀತಿ, ಬಿಹಾರದ ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಅವರ ನಂತರ ಅವರ ಮಗ ಚಿರಾಗ್ ಪಾಸ್ವಾನ್ ಅಧಿಕಾರಕ್ಕೆ ಬಂದರು.
ದೇಶದ ಹೃದಯಭಾಗವನ್ನು ಮೀರಿ, ಕುಟುಂಬ ರಾಜಕೀಯ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರವನ್ನು ಅಬ್ದುಲ್ಲಾ ಅವರ ಮೂರು ತಲೆಮಾರುಗಳು ಮುನ್ನಡೆಸುತ್ತಿವೆ. ಮುಫ್ತಿ ಕುಟುಂಬವು ವಿರೋಧ ಪಕ್ಷದಲ್ಲಿ ಪ್ರಾಬಲ್ಯ ಹೊಂದಿದೆ. ಪಂಜಾಬ್‌ನಲ್ಲಿ, ಶಿರೋಮಣಿ ಅಕಾಲಿ ದಳವು ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಅವರ ಮಗ ಸುಖ್‌ಬೀರ್‌ಗೆ ಹಸ್ತಾಂತರವಾಯಿತು. ತೆಲಂಗಾಣದಲ್ಲಿ, ಭಾರತ ರಾಷ್ಟ್ರ ಸಮಿತಿಯು ಸಂಸ್ಥಾಪಕ ಕೆ. ಚಂದ್ರಶೇಖರ ರಾವ್ ಅವರ ಮಕ್ಕಳ ನಡುವೆ ಉತ್ತರಾಧಿಕಾರದ ಹೋರಾಟವನ್ನು ನೋಡುತ್ತಿದ್ದೇವೆ.
ತಮಿಳುನಾಡಿನಲ್ಲಿ, ದಿವಂಗತ ಎಂ. ಕರುಣಾನಿಧಿ ಅವರ ಕುಟುಂಬವು ಡಿಎಂಕೆಯನ್ನು ನಿಯಂತ್ರಿಸುತ್ತಿದೆ. ಮಗ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಮತ್ತು ಅವರ ಮೊಮ್ಮಗನನ್ನು ಉತ್ತರಾಧಿಕಾರಿಯಾಗಿ ಮಾಡಲಾಗಿದೆ.
"ಭಾರತೀಯ ರಾಜಕೀಯವು ಒಂದು ಕುಟುಂಬ ವ್ಯವಹಾರ" ಎಂಬ ಶೀರ್ಷಿಕೆಯಲ್ಲಿ ಪ್ರಾಜೆಕ್ಟ್ ಸಿಂಡಿಕೇಟ್‌ಗಾಗಿ ಬರೆದ ಲೇಖನದಲ್ಲಿ ತರೂರ್, ಕುಟುಂಬ ರಾಜಕೀಯವು ಕೆಲವು ಪ್ರಮುಖ ಕುಟುಂಬಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಗಮನಿಸಿದರು. ಬದಲಾಗಿ, ಇದು ಗ್ರಾಮ ಮಂಡಳಿಗಳಿಂದ ಸಂಸತ್ತಿನ ಅತ್ಯುನ್ನತ ಮಟ್ಟದವರೆಗೆ ಭಾರತೀಯ ಆಡಳಿತದಲ್ಲಿ ಆಳವಾಗಿ ಬೇರೂರಿದೆ.
Advertisement