

ಗುವಾಹಟಿ: ಮಣಿಪುರದಲ್ಲಿ ಮಂಗಳವಾರ ಬೆಳಗಿನ ಜಾವ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಯುನೈಟೆಡ್ ಕುಕಿ ನ್ಯಾಷನಲ್ ಆರ್ಮಿ(ಯುಕೆಎನ್‌ಎ) ಎಂಬ ದಂಗೆಕೋರ ಗುಂಪಿನ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಚುರಾಚಂದ್‌ಪುರ ಜಿಲ್ಲೆಯ ಹೆಂಗ್ಲೆಪ್ ಉಪವಿಭಾಗದ ಖಾನ್ಪಿ ಗ್ರಾಮದಲ್ಲಿ ಈ ಎನ್ ಕೌಂಟರ್ ನಡೆದಿದೆ.
"ಮಣಿಪುರದ ಚುರಾಚಂದ್‌ಪುರದಿಂದ ಪಶ್ಚಿಮಕ್ಕೆ ಸುಮಾರು 80 ಕಿ.ಮೀ ದೂರದಲ್ಲಿರುವ ಖಾನ್ಪಿ ಗ್ರಾಮದಲ್ಲಿ ಸೇನಾ ಪಡೆಯ ಮೇಲೆ ಭಯೋತ್ಪಾದಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ, ಭಯೋತ್ಪಾದಕ ಗುಂಪಿನ ನಾಲ್ವರು ಮೃತಪಟ್ಟಿದ್ದಾರೆ" ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
"ಯುಕೆಎನ್‌ಎ ಉಗ್ರರ ಇತ್ತೀಚಿನ ದೌರ್ಜನ್ಯಗಳನ್ನು ಅನುಸರಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹತ್ಯೆಯಾದ ಉಗ್ರರು, ಗ್ರಾಮದ ಮುಖ್ಯಸ್ಥನ ಹತ್ಯೆ, ಸ್ಥಳೀಯರಿಗೆ ಬೆದರಿಕೆ ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಭಂಗಗೊಳಿಸುವ ಪ್ರಯತ್ನ ನಡೆಸಿದ್ದರು.
ಈ ಭಯೋತ್ಪಾದಕರನ್ನು ಯಶಸ್ವಿಯಾಗಿ ತಟಸ್ಥಗೊಳಿಸಿರುವುದು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್, ಮುಗ್ಧ ನಾಗರಿಕರನ್ನು ರಕ್ಷಿಸುವ ಮತ್ತು ಬೆದರಿಕೆಗಳನ್ನು ತಗ್ಗಿಸಿ ಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧತೆಯನ್ನು ಎತ್ತಿ ತೋರಿಸುತ್ತದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯುಕೆಎನ್‌ಎ ಹೆಚ್ಚಾಗಿ ಚುರಚಂದಪುರ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.
Advertisement