

ರಾಯಪುರ: ಛತ್ತೀಸ್ ಗಢದ ರಾಜಧಾನಿ ರಾಯಪುರದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಜಿಲ್ಲೆಯಲ್ಲಿ ನಡೆಯುತ್ತಿದ್ದ ರಾಜ್ಯೋತ್ಸವ ವೇಳೆ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ಹಿನ್ನೆಲೆಯಲ್ಲಿ ಕವರ್ಧಾದ ಸ್ಥಳೀಯ ಬಿಜೆಪಿ ನಾಯಕನ ವಿರುದ್ಧ ಛತ್ತೀಸ್‌ಗಢ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕವರ್ಧಾ ಗೃಹ ಸಚಿವ ವಿಜಯ್ ಶರ್ಮಾ ಅವರ ತವರು ಜಿಲ್ಲೆಯಾಗಿದೆ. ಪಿಜಿ ಕಾಲೇಜಿನಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ವೇಳೆಯಲ್ಲಿ ಬಿಜೆಪಿ ನಾಯಕ ಇತರ ಕಾರ್ಯಕರ್ತರೊಂದಿಗೆ ಸೇರಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಂದಿಗೆ ಅಸಭ್ಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಕವರ್ಧಾ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಯೋಗೇಶ್ ಕುಮಾರ್ ಕಶ್ಯಪ್ ತಿಳಿಸಿದ್ದಾರೆ.
"ರಾಕೇಶ್ ಸಾಹು ಎಂಬ ವ್ಯಕ್ತಿ ಕಾರ್ಯಕ್ರಮದ ಸಮಯದಲ್ಲಿ ಪದೇ ಪದೇ ಗೊಂದಲ ಸೃಷ್ಟಿಸಿ, ಪ್ರೇಕ್ಷಕರಲ್ಲಿ ಕಿರಿಕಿರಿ ಉಂಟುಮಾಡಿದ್ದಾನೆ.
ಪೊಲೀಸರೊಂದಿಗೆ ಗಲಾಟೆ ಮಾಡಿದ್ದು, ಸಬ್-ಇನ್ಸ್‌ಪೆಕ್ಟರ್ ರಜನಿಕಾಂತ್ ದಿವಾನ್ ಅವರ ಸಮವಸ್ತ್ರವನ್ನು ಕಿತ್ತುಕೊಂಡು ಅಸಭ್ಯವಾಗಿ ನಿಂದಿಸಿದ್ದಾನೆ. ಸಮವಸ್ತ್ರ ಬಿಚ್ಚುವುದಾಗಿ ಬೆದರಿಕೆ ಹಾಕಿರುವುದಾಗಿ ಕಶ್ಯಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ. ಬಿಎನ್‌ಎಸ್ ಸೆಕ್ಷನ್ 296 (ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ) ಸೆಕ್ಷನ್ 132 (ಸಾರ್ವಜನಿಕ ನೌಕರನ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಮತ್ತು ಸೆಕ್ಷನ್ 221 (ಸರ್ಕಾರಿ ನೌಕರನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
Advertisement