

ನವದೆಹಲಿ: ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರ ಎರಡು ದಿನಗಳ ನವದೆಹಲಿ ಪ್ರವಾಸದ ನಂತರ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರು ಮುಂದಿನ ವಾರ ಕೆನಡಾಕ್ಕೆ ಭೇಟಿ ನೀಡಲಿದ್ದಾರೆ.
ಮಾಜಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆಡಳಿತಾವಧಿಯಲ್ಲಿ (2023-24) ಉಭಯ ದೇಶಗಳ ನಡುವಣ ಸಂಬಂಧ ಹದೆಗೆಟ್ಟಿತ್ತು. ಇದಾದ ನಂತರ ಉಭಯ ದೇಶಗಳು ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಪ್ರಯತ್ನಿಸುತ್ತಿರುವಂತೆಯೇ ಜೈಶಂಕರ್ ಈಗ ಕೆನಡಾಕ್ಕೆ ಭೇಟಿ ನೀಡುತ್ತಿದ್ದಾರೆ.
ಜೈಶಂಕರ್ ನವೆಂಬರ್ 11–12 ರಂದು ಒಂಟಾರಿಯೊದ ನಯಾಗರಾ ಪ್ರದೇಶದಲ್ಲಿ ನಡೆಯಲಿರುವ ಜಿ7 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದು, ಜಾಗತಿಕ ಭದ್ರತೆ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಅಂತಾರಾಷ್ಟ್ರೀಯ ಸಹಕಾರದ ಕುರಿತು ಚರ್ಚೆ ನಡೆಸಲಿದ್ದಾರೆ.
ಪ್ರಸ್ತುತ ಜಿ7 ಅಧ್ಯಕ್ಷತೆಯನ್ನು ಹೊಂದಿರುವ ಕೆನಡಾ, ಈ ವರ್ಷ ಎರಡನೇ ಬಾರಿಗೆ ಸಭೆಯನ್ನು ಆಯೋಜಿಸುತ್ತಿದೆ. ಈ ಸಭೆಯು ಜಾಗತಿಕ ಸವಾಲುಗಳನ್ನು ಚರ್ಚಿಸಲು ಮತ್ತು ಅಂತಾರಾಷ್ಟ್ರೀಯ ಸಹಯೋಗವನ್ನು ಬಲಪಡಿಸಲು ಜಿ7 ಸಚಿವರನ್ನು ಒಟ್ಟುಗೂಡಿಸುತ್ತಿದೆ ಎಂದು ಕೆನಡಾದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ
ಭಾರತ ಜಿ-7 ಸದಸ್ಯ ರಾಷ್ಟ್ರ ಅಲ್ಲದಿದ್ದರೂ ದೇಶವು ಸಭೆಯಲ್ಲಿ ನಿಯಮಿತ ಆಹ್ವಾನಿತ ರಾಷ್ಟ್ರವಾಗಿದೆ. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮಾರ್ಕ್ ಕಾರ್ನಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಜತಾಂತ್ರಿಕ ಸಂಪರ್ಕ ಪುನರ್ ಆರಂಭವಾಗಿದೆ. ಜೂನ್‌ನಲ್ಲಿ ನಡೆದ G7 ಶೃಂಗಸಭೆಯ ಸಂದರ್ಭದಲ್ಲಿ ಕಾರ್ನಿ- ಪ್ರಧಾನಿ ನರೇಂದ್ರ ಮೋದಿ ಭೇಟಿಯು ಹದಗೆಟ್ಟ ಸಂಬಂಧ ಉತ್ತಮಪಡಿಸಲು ಅಡಿಪಾಯ ಹಾಕಿತು.
ಸಂಬಂಧದಲ್ಲಿ ಸ್ಥಿರತೆಯನ್ನು ಪುನರ್ ಸ್ಥಾಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ" ಮತ್ತು "ಪರಸ್ಪರ ಗೌರವ- ಸಮಾನ ಹಿತಾಸಕ್ತಿ ಆಧರಿಸಿದ ಪಾಲುದಾರಿಕೆ ಅನುಸರಿಸುವಂತೆ ಉಭಯ ನಾಯಕರು ತಮ್ಮ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದರು ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಂದಿನಿಂದ, ರಾಜತಾಂತ್ರಿಕ ಚಟುವಟಿಕೆಗಳು ಚುರುಕುಗೊಂಡಿವೆ. ಅಕ್ಟೋಬರ್‌ನಲ್ಲಿ ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರ ಭಾರತ ಭೇಟಿಯಲ್ಲಿ ಮೋದಿ ಮತ್ತು ಜೈಶಂಕರ್ ಅವರೊಂದಿಗಿನ ಸಭೆ ನಡೆದಿತ್ತು. ಅಲ್ಲದೇ ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ ಸಭೆ ಕೂಡಾ ನಡೆದಿತ್ತು. ನವದೆಹಲಿ ಮತ್ತು ಕೆನಡಾ ಆಗಸ್ಟ್‌ನಲ್ಲಿ ತಮ್ಮ ಹೈಕಮಿಷನರ್‌ಗಳನ್ನು ನೇಮಕ ಮೂಲಕ ಒಂದು ವರ್ಷದ ಹದಗೆಟ್ಟ ಸಂಬಂಧದ ನಂತರ ರಾಜತಾಂತ್ರಿಕ ಸಂಪರ್ಕ ಪುನರ್ ಆರಂಭಗೊಂಡಿತ್ತು.
ಶುದ್ಧ ಇಂಧನ, ನಿರ್ಣಾಯಕ ಖನಿಜಗಳು, ಕೃತಕ ಬುದ್ಧಿಮತ್ತೆ, ಎಲ್‌ಎನ್‌ಜಿ, ಆಹಾರ ಭದ್ರತೆ, ಉನ್ನತ ಶಿಕ್ಷಣ ಕ್ಷೇತ್ರಗಳು ಸಂಭಾವ್ಯ ಸಹಕಾರದ ಕ್ಷೇತ್ರಗಳಾಗಿವೆ. ಆದ್ದರಿಂದ, ಜೈಶಂಕರ್ ಅವರ ಮುಂಬರುವ ಭೇಟಿಯನ್ನು ಪ್ರಮುಖ ಹೆಜ್ಜೆ ಎಂದೇ ನೋಡಲಾಗುತ್ತಿದೆ.
Advertisement