

ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯ ಚುನಾರ್ ರೈಲು ನಿಲ್ದಾಣಕ್ಕೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದು ಆರು ಮಂದಿ ಮಹಿಳೆಯರು ಮೃತಪಟ್ಟಿರುವ ಘಟನೆ ಇಂದು ಬುಧವಾರ ನಡೆದಿದೆ.
ಚೋಪನ್ ಎಕ್ಸ್‌ಪ್ರೆಸ್‌ನಿಂದ ಹಳಿಯ ತಪ್ಪು ಭಾಗದಲ್ಲಿ ಇಳಿಯುವಾಗ ನೇತಾಜಿ ಎಕ್ಸ್‌ಪ್ರೆಸ್ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಚೋಪನ್ ಎಕ್ಸ್‌ಪ್ರೆಸ್ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಪಾದಚಾರಿ ಸೇತುವೆಯನ್ನು ಬಳಸುವ ಬದಲು, ಕೆಲವು ಪ್ರಯಾಣಿಕರು ನೇರವಾಗಿ ಹಳಿಗಳ ಮೇಲೆ ಇಳಿಯಲು ಪ್ರಯತ್ನಿಸಿದರು. ಇಂತಹ ಸಂದರ್ಭದಲ್ಲಿ ಹತ್ತಿರ ಬರುತ್ತಿದ್ದ ರೈಲು ಅವರ ಮೇಲೆ ಹರಿದಿದೆ ಎಂದು ಎನ್‌ಸಿಆರ್ ಪ್ರಯಾಗ್‌ರಾಜ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಅವರು ಸ್ಥಳೀಯ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ತಲುಪಲು ಮತ್ತು ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೂಚನೆ ನೀಡಿದರು.
ಅಪಘಾತ ಸ್ಥಳದಲ್ಲಿ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳನ್ನು ಕಳುಹಿಸಲಾಗಿದೆ.
Advertisement