

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇಂದು ಬೆಳಗ್ಗೆಯಿಂದಲೇ ಆರಂಭವಾಗಿದೆ. ‘ಇಂಡಿಯಾ’ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ಹಾಲಿ ಉಪ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಸಾಮ್ರಾಟ್ ಚೌಧರಿ ಅವರು ಈ ಹಂತದಲ್ಲಿ ಕಣದಲ್ಲಿರುವ ಪ್ರಮುಖರು. ಬಿಹಾರ ಸರ್ಕಾರದ ಪ್ರಮುಖವಾಗಿ ಬಿಜೆಪಿಯ ಅರ್ಧಕ್ಕೂ ಹೆಚ್ಚು ಸಚಿವರು ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.
ಮೊದಲ ಹಂತವು ಬಿಹಾರ ರಾಜಕೀಯ ದಿಕ್ಕನ್ನು ನಿರ್ಧರಿಸುವುದಲ್ಲದೆ, ಎನ್ಡಿಎ ಮತ್ತು ಮಹಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆ ಇದಾಗಿರಲಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ಮತಗಟ್ಟೆಯಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿ, ವಿಸ್ತಾರವಾದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮೊದಲ ಹಂತದಲ್ಲಿ 18 ಜಿಲ್ಲೆಗಳ 121 ಸ್ಥಾನಗಳಿಗೆ ಮತದಾನ ನಡೆಯಲಿದೆ. 121 ಕ್ಷೇತ್ರಗಳಲ್ಲಿ 1,314 ಅಭ್ಯರ್ಥಿಗಳ ಭವಿಷ್ಯವನ್ನು 3.75 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. 25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನೇರ ಸ್ಪರ್ಧೆ ಇದೆ.
12 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದರೆ, 34 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ. 11 ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುತ್ತಿದೆ, ಮತ್ತು 14 ಸ್ಥಾನಗಳಲ್ಲಿ ಎಲ್‌ಜೆಪಿ (ಆರ್) ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ, ಈ ಪೈಕಿ 12 ಸ್ಥಾನಗಳಲ್ಲಿ ನೇರ ಸ್ಪರ್ಧೆಗಳಿವೆ.
ರಘೋಪುರ ವಿಧಾನಸಭಾ ಕ್ಷೇತ್ರದಿಂದ ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರು ಸ್ಪರ್ಧಿಸುತ್ತಿದ್ದಾರೆ. ತಂದೆ ಲಾಲು ಪ್ರಸಾದ್ ಎರಡು ಬಾರಿ, ತಾಯಿ ರಾಬ್ಡಿ ದೇವಿ ಅವರು ಮೂರು ಬಾರಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ವಿಶೇಷವೆಂದರೆ, ಈ ಕ್ಷೇತ್ರದಿಂದ ಗೆದ್ದ ಬಳಿಕ ಈ ಇಬ್ಬರೂ ಮುಖ್ಯಮಂತ್ರಿಯಾಗಿದ್ದರು. ಈಗ ತೇಜಸ್ವಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.
ಮಹುವಾ ಕ್ಷೇತ್ರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಮತ್ತೊಬ್ಬ ಮಗ ತೇಜ್ ಪ್ರತಾಪ್ ಅವರು ಸ್ಪರ್ಧಿಸುತ್ತಿದ್ದಾರೆ. ಕೌಂಟುಬಿಕ ಕಾರಣಗಳಿಂದ ಲಾಲು ಪ್ರಸಾದ್ ಅವರು ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಹೊರಹಾಕಿದ್ದರು. ಬಳಿಕ ಇವರು ಜನಶಕ್ತಿ ಜನತಾದಳ ಪಕ್ಷ ಕಟ್ಟಿದರು
ಸಾಮ್ರಾಟ್ ಚೌಧರಿ ಅವರು ತಾರಾಪುರ ವಿಧಾನಸಭಾ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಎರಡು ಬಾರಿ ಇವರು ವಿಧಾನ ಪರಿಷತ್ ಸದಸ್ಯರಾಗಿದ್ದರು. ಸುಮಾರು 10 ವರ್ಷಗಳ ಬಳಿಕ ಇವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜನಪದ ಗಾಯಕಿ 25 ವರ್ಷ ಮಿಥಾಲಿ ಠಾಕೂರ್ ಅವರು ಅಲಿನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಇಂದು ಬಿಹಾರದಲ್ಲಿ ಪ್ರಜಾಪ್ರಭುತ್ವದ ಆಚರಣೆಯ ಮೊದಲ ಹಂತವಾಗಿದೆ. ವಿಧಾನಸಭಾ ಚುನಾವಣೆಯ ಈ ಹಂತದಲ್ಲಿ ಎಲ್ಲಾ ಮತದಾರರು ಪೂರ್ಣ ಉತ್ಸಾಹದಿಂದ ಮತ ಚಲಾಯಿಸಬೇಕೆಂದು ನಾನು ಕೋರುತ್ತೇನೆ. ಈ ಸಂದರ್ಭದಲ್ಲಿ, ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ರಾಜ್ಯದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ನನ್ನ ವಿಶೇಷ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.
Advertisement