

ಪಾಟ್ನಾ: ಬಿಹಾರ ವಿಧಾನಸಭೆಗೆ ಇಂದು ನಡೆದ ಮೊದಲ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 121 ಕ್ಷೇತ್ರಗಳಾದ್ಯಂತ 3.75 ಕೋಟಿ ಮತದಾರರು, 1,314 ಅಭ್ಯರ್ಥಿಗಳ ಭವಿಷ್ಯವನ್ನು ಮತಪೆಟ್ಟಿಗೆಯಲ್ಲಿ ಭದ್ರಪಡಿಸಿದ್ದಾರೆ.
ಆರ್ ಜೆಡಿಯ ತೇಜಸ್ವಿ ಯಾದವ್, ಬಿಜೆಪಿ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ಮಂಗಳ್ ಪಾಂಡೆ, ತೇಜ್ ಪ್ರತಾಪ್ ಯಾದವ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹಣೆಬರಹವನ್ನು ಮತದಾರರು ನಿರ್ಧರಿಸಿದ್ದಾರೆ.
ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ಜನಪ್ರಿಯ ಗಾಯಕಿ ಮೈಥಿಲಿ ಠಾಕೂರ್ ಹಾಗೂ ಬೋಜ್ ಪುರಿ ನಟ ಕೇಶರಿ ಲಾಲ್ ಯಾದವ್ ಅವರ ಕ್ಷೇತ್ರಗಳಲ್ಲಿಯೂ ಮತದಾನ ನಡೆದಿದೆ.
ಭಾರತ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅಂದಾಜು ಶೇ. 60.25 ರಷ್ಟು ಮತದಾನವಾಗಿದೆ. ಗುರುವಾರ 121 ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದ್ದು, ಜನರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಬೇಗುಸರಾಯ್‌ನಲ್ಲಿ ಅತಿ ಹೆಚ್ಚು ಅಂದರೆ ಶೇ. 67.32 ರಷ್ಟು ಮತದಾನ ದಾಖಲಾಗಿದೆ ಎಂದು ಆಯೋಗ ತಿಳಿಸಿದೆ.
ಗುರುವಾರ ಸಂಜೆ 5 ಗಂಟೆಯ ಹೊತ್ತಿಗೆ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಕ್ಷೇತ್ರಗಳಲ್ಲಿ 3.75 ಕೋಟಿ ಮತದಾರರಲ್ಲಿ ಶೇ. 60.18 ರಷ್ಟು ಜನರು ತಮ್ಮ ಮತ ಚಲಾಯಿಸಿದ್ದಾರೆ.
ಬೇಗುಸರಾಯ್‌ನಲ್ಲಿ ಶೇ. 67.32 ರಷ್ಟು ಜನರು ಮತದಾನ ಮಾಡಿದ್ದಾರೆ. ನಂತರ ಸಮಷ್ಟಿಪುರ (66.65%) ಮತ್ತು ಮಾಧೇಪುರ (65.74%) ಅತಿ ಹೆಚ್ಚು ಮತದಾನ ದಾಖಲಾಗಿದೆ.ಮುಜಫರ್‌ಪುರ ಮತ್ತು ಗೋಪಾಲ್‌ಗಂಜ್‌ನಲ್ಲಿ (58% ಕ್ಕಿಂತ ಹೆಚ್ಚು) ಮತದಾನವಾಗಿದೆ. ಇದು ಹೆಚ್ಚಿನ ಜನರು ಮತದಾನದಲ್ಲಿ ತೊಡಗಿಸಿಕೊಂಡಿರುವುದನ್ನು ತೋರಿಸುತ್ತದೆ. ಪಾಟ್ನಾ ನಗರದಲ್ಲಿ ಶೇ. 48.69 ರಷ್ಟು ಕಡಿಮೆ ಮತದಾನವಾಗಿದೆ. ಬಂಕಿಪುರ ಶೇ. 34.8, ದಿಘಾದಲ್ಲಿ ಶೇ. 31.89 ಮತ್ತು ಕುಮ್ರಾರ್ ನಲ್ಲಿ ಶೇ. 37.73 ರಷ್ಟು ಮತದಾನವಾಗಿದೆ.
Advertisement