

ಬಂಕಾ: ದೆಹಲಿಯಲ್ಲಿ ತಮ್ಮ ಮತ ಚಲಾಯಿಸಿದ ಬಿಜೆಪಿ ನಾಯಕರು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿಯೂ ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಬಿಹಾರದ ಬಂಕಾದಲ್ಲಿ ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಹರಿಯಾಣ ಚುನಾವಣೆಯಲ್ಲಿ "ಮತ ಚೋರಿ" ಬಗ್ಗೆ ಕಾಂಗ್ರೆಸ್ ಪುರಾವೆಗಳನ್ನು ನೀಡಿದೆ. ಚುನಾವಣಾ ಆಯೋಗ ನಮ್ಮ ಆರೋಪಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ "ಮತಗಳ್ಳತನ" ನಡೆದಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಬುಧವಾರ ಆರೋಪಿಸಿದ್ದರು. ಮತದಾರರ ಪಟ್ಟಿಯ ಡೇಟಾವನ್ನು ಉಲ್ಲೇಖಿಸಿ, 25 ಲಕ್ಷ ಮತದಾರರು ನಕಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
"ದೆಹಲಿಯಲ್ಲಿ ಮತ ಚಲಾಯಿಸಿದ ಬಿಜೆಪಿ ನಾಯಕರು ಬಿಹಾರ ಚುನಾವಣೆಯ ಮೊದಲ ಹಂತದಲ್ಲೂ (ಗುರುವಾರ) ಮತ ಚಲಾಯಿಸಿದ್ದಾರೆ ಎಂದು ನನಗೆ ನಿನ್ನೆ ತಿಳಿದುಬಂದಿದೆ" ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಆದರೆ ಹೆಚ್ಚಿನ ವಿವರಣೆ ಅಥವಾ ಯಾರ ಹೆಸರನ್ನೂ ತಿಳಿಸಿಲ್ಲ.
"ಹರಿಯಾಣದಲ್ಲಿರುವ 2 ಕೋಟಿ ಮತದಾರರಲ್ಲಿ 29 ಲಕ್ಷ ಮತದಾರರು ನಕಲಿ... ಬಿಜೆಪಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಹರಿಯಾಣದಲ್ಲಿ 'ವೋಟ್ ಚೋರಿ' ಮಾಡಿದ್ದಾರೆ ಮತ್ತು ಈಗ ಅವರು ಬಿಹಾರದಲ್ಲಿ ಅದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಿಹಾರದ ಜನರು ತಮ್ಮ ರಾಜ್ಯದಲ್ಲಿ ಇದು ಸಂಭವಿಸಲು ಬಿಡುವುದಿಲ್ಲ ಎಂದು ನನಗೆ ಖಚಿತವಾಗಿದೆ" ಎಂದು ಹೇಳುವ ಮೂಲಕ ಅವರು ಚುನಾವಣಾ ಅಕ್ರಮಗಳ ಕುರಿತಾದ ತಮ್ಮ ಆರೋಪವನ್ನು ಪುನರುಚ್ಚರಿಸಿದರು.
Advertisement