

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ತಮ್ಮ ಪುತ್ರ ಪಾರ್ಥ್ ಪವಾರ್ ಭಾಗಿಯಾಗಿದ್ದಾರೆ ಎನ್ನಲಾದ ಪುಣೆಯ ವಿವಾದಾತ್ಮಕ ಭೂ ವ್ಯವಹಾರವನ್ನು ರದ್ದುಗೊಳಿಸಲಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಪುಣೆಯ ಭೂ ವ್ಯವಹಾರದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿನ್ನೆ ತನಿಖೆಗೆ ಆದೇಶಿಸಿದ್ದರು.
ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ತಮ್ಮ ಪುತ್ರ ಪಾರ್ಥ ಪವಾರ್ ಅವರಿಗೆ ಸಂಬಂಧಿಸಿದ ಕಂಪನಿಯೊಂದಿಗಿನ ಭೂ ವ್ಯವಹಾರ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪುತ್ರ ಪಾರ್ಥ್‌ಗೆ ಸಂಬಂಧಿಸಿದ ಪುಣೆ ಭೂ ವ್ಯವಹಾರದ ಕುರಿತು ಸರ್ಕಾರ ನೇಮಿಸಿದ ತನಿಖಾ ಸಮಿತಿಯು ಒಂದು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
"ಪುಣೆ ಭೂ ವ್ಯವಹಾರದ ತನಿಖೆಯನ್ನು ರಾಜಕೀಯ ಹಸ್ತಕ್ಷೇಪವಿಲ್ಲದೆ, ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕು" ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಈ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕಂದಾಯ) ವಿಕಾಸ್ ಖರ್ಗೆ ಅವರು ಈ ತನಿಖೆಯನ್ನು ನಡೆಸಲಿದ್ದಾರೆ. ಪುಣೆ ಜಿಲ್ಲಾಧಿಕಾರಿಗಳು ಭೂಮಿಯ ಮಾರಾಟ ಪತ್ರವನ್ನು ರದ್ದುಪಡಿಸುವುದಾಗಿ ತಿಳಿಸಿದ್ದಾರೆ.
ಈ ಭೂ ವ್ಯವಹಾರ ಪ್ರತಿಷ್ಠಿತ ಕೋರೆಗಾಂವ್ ಪಾರ್ಕ್ ಪ್ರದೇಶದ ಬಳಿ 40 ಎಕರೆ ಭೂಮಿಗೆ ಸಂಬಂಧಿಸಿದೆ. ಸುಮಾರು 1,800 ಕೋಟಿ ರೂಪಾಯಿ ಮೌಲ್ಯದ ಈ ಭೂಮಿಯನ್ನು, ಪಾರ್ಥ ಪವಾರ್ ಪಾಲುದಾರರಾಗಿರುವ ಅಮೇಡಿಯಾ ಎಂಟರ್‌ಪ್ರೈಸಸ್ ಎಲ್‌ಎಲ್‌ಪಿ ಎಂಬ ಕಂಪನಿಗೆ 300 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಈ ವ್ಯವಹಾರದಲ್ಲಿ 21 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
Advertisement