
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ರೈತರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕಬ್ಬಿಗೆ 33,00 ರೂಪಾಯಿ ಕನಿಷ್ಟ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ರೈತರೊಂದಿಗಿನ ಸಭೆಯ ಬಳಿಕ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರದಿಂದ ರೈತರಿಗೆ 50 ರೂಪಾಯಿ ಸಬ್ಸಿಡಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ 50 ರೂಪಾಯಿ ಸೇರಿ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ನಿಗದಿಪಡಿಸುವುದಾಗಿ ಘೋಷಿಸಿದ್ದಾರೆ. ಇನ್ನು ರೈತರು, ಸಕ್ಕರೆ ಕಾರ್ಖಾನೆ ಮಾಲಿಕರೊಂದಿಗಿನ ಸಭೆಯ ವೇಳೆ ಸಿಎಂ ಪ್ರಸ್ತಾವನೆಗೆ ಸಕ್ಕರೆ ಕಾರ್ಖಾನೆ ಮಾಲಿಕರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ತೀವ್ರ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ, ನಿಮಗೆ ಸರ್ಕಾರದ ಬೆಂಬಲ ಬೇಡವಾ? ಎಂದು ಕಾರ್ಖಾನೆಗಳ ಮಾಲಿಕರನ್ನು ಪ್ರಶ್ನಿಸಿದ ಪ್ರಸಂಗವೂ ನಡೆಯಿತು. ಇದಕ್ಕೂ ಮೊದಲು ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರು ಜಿಲ್ಲೆಯ ಮೂರು ಸ್ಥಳಗಳಲ್ಲಿ ಹೆದ್ದಾರಿ ತಡೆ ನಡೆಸಿದ್ದರು ರೈತರನ್ನು ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಲಾಠಿ ಚಾರ್ಜ್ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಲಾಠಿ ಚಾರ್ಜ್ಗೆ ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ರೈತರು ರಸ್ತೆ ತಡೆ ನಡೆಸಿದ್ದರಿಂದ ಈ ಭಾಗದಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್ ಅಶೋಕ್, ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಶುಕ್ರವಾರ ಒತ್ತಾಯಿಸಿದ್ದಾರೆ. ಕೇಂದ್ರವನ್ನು ದೂಷಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಟೀಕಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ, 7 ದಿನಗಳಿಂದ ಸಾವಿರಾರು ಕಬ್ಬು ಬೆಳೆಗಾರರು ಬೀದಿಗಿಳಿದಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರ ಮುಂದಿರುವ ಒಂದೇ ಒಂದು ಪರಿಹಾರವೆಂದರೆ ಅದು ಕೇಂದ್ರವನ್ನು ದೂಷಿಸುವುದಾಗಿದೆ. ವಿರೋಧ ಪಕ್ಷದಲ್ಲಿದ್ದಾಗ ಅವರು ದೊಡ್ಡ ದೊಡ್ಡ ಉಪದೇಶಗಳನ್ನು ನೀಡುತ್ತಿದ್ದರು. ಈಗ ಅವರು ನೆಪಗಳ ಹಿಂದೆ ಅಡಗಿಕೊಂಡು ರೈತರನ್ನು ಕೈಬಿಡುತ್ತಿದ್ದಾರೆ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ ಮತ್ತು ಹೊರಡಿ' ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯ ಪ್ರಕರಣಗಳು ಹೆಚ್ಚುತ್ತಿದ್ದು, ಮತ್ತೊಬ್ಬ ರೈತ ಸಾವನ್ನಪ್ಪಿದ್ದಾನೆ. ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್ ಸ್ವಾಮಿ(58ವ) ಮೃತಪಟ್ಟಿದ್ದಾರೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದೆ. 8 ತಿಂಗಳ ಹಿಂದೆ ಡಂಡ ನಾಯ್ಕ ಮೇಲೆ ಆನೆ ದಾಳಿ ನಡೆಸಿತ್ತು. ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆ ಸ್ಥಳಕ್ಕೆ ತೆರಳಿದ RFO ಅಮೃತಾ ಮೇಲೆ ಆಕ್ರೋಶ ಹೊರಹಾಕಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಪದೇ ಪದೇ ಹುಲಿ ದಾಳಿ ಹಿನ್ನಲೆ ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದು, ಕೆಲಸಕ್ಕೆ ಹೋಗಲೂ ಸಾದ್ಯವಾಗದ ಪರಿಸ್ಥಿತಿ ಉಂಟಾಗಿದೆ. ಈಮಧ್ಯೆ, ನಾಗರಹೊಳೆ ಮತ್ತು ಬಂಡೀಪುರ ಸಫಾರಿಯನ್ನು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಬಂದ್ ಮಾಡಿ, ಹುಲಿ ಸೆರೆ ಕಾರ್ಯಾಚರಣೆಗೆ ಸಿಬ್ಬಂದಿಗಳ ನಿಯೋಜಿಸುವಂತೆ ಅರಣ್ಯ, ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಶುಕ್ರವಾರ ಕಲಬುರಗಿ ಜಿಲ್ಲಾಡಳಿತಕ್ಕೆ ಚಿತ್ತಾಪುರದಲ್ಲಿ ರೂಟ್ ಮಾರ್ಚ್ ನಡೆಸಲು ಅರ್ಜಿ ಸಲ್ಲಿಸಿರುವ ಆರ್‌ಎಸ್‌ಎಸ್ ಸೇರಿದಂತೆ ವಿವಿಧ ಸಂಘಟನೆಗಳಿಗೆ ದಿನಾಂಕಗಳನ್ನು ನಿಗದಿಪಡಿಸಿ ನವೆಂಬರ್ 13 ರಂದು ನ್ಯಾಯಾಲಯಕ್ಕೆ ವಿವರಗಳೊಂದಿಗೆ ಬರುವಂತೆ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ದಿನಾಂಕಗಳನ್ನು ನಿಗದಿಪಡಿಸಲು ವಿಫಲವಾದರೆ, ನ್ಯಾಯಾಲಯವೇ ದಿನಾಂಕವನ್ನು ನಿಗದಿಪಡಿಸುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
ರಾಜ್ಯವನ್ನು ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿಸುವ ಗುರಿಯೊಂದಿಗೆ 5 ವರ್ಷಗಳಲ್ಲಿ ಒಟ್ಟು 518. 27 ಕೋಟಿ ರೂಪಾಯಿ ವೆಚ್ಚದ ಕರ್ನಾಟಕ ನಾವೀನ್ಯತೆ ನೀತಿ 2025 -2030ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, 25,000 ಹೆಚ್ಚುವರಿ ನವೋದ್ಯಮಗಳನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅವುಗಳಲ್ಲಿ 10,000 ಸ್ಟಾರ್ಟ್ ಅಪ್ ಗಳನ್ನು ಬೆಂಗಳೂರಿನ ಹೊರಗೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement