

ಗರಿಯಾಬಂದ್: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಶುಕ್ರವಾರ ಏಳು ಮಂದಿ ಕಟ್ಟಾ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಮಹಿಳೆಯರು ಸೇರಿದಂತೆ ಈ ಏಳು ನಕ್ಸಲರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ)ದ ಉದಾಂತಿ ಪ್ರದೇಶ ಸಮಿತಿಗೆ ಸೇರಿದವರು ಎಂದು ರಾಯ್‌ಪುರ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಮರೇಶ್ ಮಿಶ್ರಾ ಅವರು ಹೇಳಿದ್ದಾರೆ.
ಉದಾಂತಿ ಪ್ರದೇಶ ಸಮಿತಿಯು ಗರಿಯಾಬಂದ್ ಮತ್ತು ಧಮತರಿ ಜಿಲ್ಲೆ ಹಾಗೂ ಒಡಿಶಾದ ಪಕ್ಕದ ಜಿಲ್ಲೆಗಳಲ್ಲಿ ಮಾವೋವಾದಿ ಚಟುವಟಿಕೆಗಳನ್ನು ನಿರ್ವಹಿಸುವ ಪ್ರಮುಖ ಸಂಘಟನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಶರಣಾದ ನಕ್ಸಲರು ಒಂದು ಸೆಲ್ಫ್ ಲೋಡಿಂಗ್ ರೈಫಲ್, ಮೂರು ಇನ್ಸಾಸ್ ರೈಫಲ್‌ಗಳು ಮತ್ತು ಎರಡು ದೇಶೀಯ ಬಂದೂಕುಗಳು ಸೇರಿದಂತೆ ಆರು ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಹೇಳಿಕೆಯ ಪ್ರಕಾರ, ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಮೂಲದ ಶರಣಾದ ಉಗ್ರ ಸುನಿಲ್ ಅಲಿಯಾಸ್ ಜಗ್ತಾರ್ ಸಿಂಗ್ ಮತ್ತು ಅವರ ಪತ್ನಿ ಅರಿನಾ ಟೆಕಮ್ ಅಲಿಯಾಸ್ ಸುಗಾರೊ ಕ್ರಮವಾಗಿ ಉದಾಂತಿ ಪ್ರದೇಶ ಸಮಿತಿಯ ವಿಭಾಗೀಯ ಸಮಿತಿ ಸದಸ್ಯ ಮತ್ತು ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದರು. ಅವರ ತಲೆಗೆ ತಲಾ 8 ಲಕ್ಷ ರೂ. ಬಹುಮಾನ ಸೇರಿದಂತೆ ಶರಣಾದ ನಕ್ಸಲರ ತಲೆಗೆ ಒಟ್ಟು 37 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
Advertisement