

ಡೆಹ್ರಾಡೂನ್: ಉತ್ತರಾಖಂಡದ ಬೆಳ್ಳಿ ಮಹೋತ್ಸವ ಆಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅರಣ್ಯ ಸಂಶೋಧನಾ ಸಂಸ್ಥೆ(ಎಫ್‌ಆರ್‌ಐ) ಮೈದಾನದಲ್ಲಿ 8,260 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು.
ಬಳಿಕ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ದೇವಭೂಮಿ ಉತ್ತರಾಖಂಡ್ ಕಾ ಮೇರಾ ಭಾಯಿ ಬಂಧು, ದೀದಿ ಭೂಲಿ, ದಾನ ಸ್ಯಾನಾ, ಆಪ್ ಸಭ್ಯತೇನ್ ಮ್ಯಾರ್ ನಮಸ್ಕಾರ್" (ದೇವಭೂಮಿ ಉತ್ತರಾಖಂಡದ ನನ್ನ ಸಹೋದರ ಸಹೋದರಿಯರೇ, ಹಿರಿಯರೇ ಮತ್ತು ಯುವಕರೇ, ನಾನು ನಿಮ್ಮೆಲ್ಲರಿಗೂ ನನ್ನ ಗೌರವಯುತ ಸಮಸ್ಕಾರಗಳು). ಎಂದರು.
ಉತ್ತರಾಖಂಡವು ಭಾರತದ ಆಧ್ಯಾತ್ಮಿಕ ಹೃದಯ ಬಡಿತವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಯಾತ್ರಿಕರನ್ನು ಸೆಳೆಯುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
"ಈ ಭಕ್ತರ ಪ್ರಯಾಣವು ಭಕ್ತಿಯ ಮಾರ್ಗವನ್ನು ತೆರೆಯುತ್ತದೆ ಮತ್ತು ಅದೇ ಸಮಯದಲ್ಲಿ ಉತ್ತರಾಖಂಡದ ಆರ್ಥಿಕತೆಗೆ ಹೊಸ ಶಕ್ತಿಯನ್ನು ತುಂಬುತ್ತದೆ" ಎಂದು ಅವರು ತಿಳಿಸಿದರು.
ರಾಜ್ಯ ರಚನೆಯಾದಾಗಿನಿಂದ ಆರ್ಥಿಕ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಆಗಿರುವ ನಾಟಕೀಯ ಬದಲಾವಣೆಯನ್ನು ಪ್ರಧಾನಿ ಮೋದಿ ಎತ್ತಿ ತೋರಿಸಿದರು. "ಇಪ್ಪತ್ತೈದು ವರ್ಷಗಳ ಹಿಂದೆ, ಉತ್ತರಾಖಂಡದ ವಾರ್ಷಿಕ ಬಜೆಟ್ ಸುಮಾರು 4,000 ಕೋಟಿ ರೂ.ಗಳಾಗಿತ್ತು; ಇಂದು ಅದು 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ" ಎಂದರು.
ಪ್ರಮುಖ ವಲಯಗಳಲ್ಲಿನ ಪ್ರಗತಿಯನ್ನು ಮತ್ತಷ್ಟು ಪಟ್ಟಿ ಮಾಡಿದ ಪ್ರಧಾನಿ ಮೋದಿ, ವಿದ್ಯುತ್ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಾಗಿದೆ, ರಸ್ತೆಗಳ ಉದ್ದ ದ್ವಿಗುಣಗೊಂಡಿದೆ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಒಂದರಿಂದ ಹತ್ತಕ್ಕೆ ಏರಿದೆ ಎಂದರು.
ಇಂದು ಉದ್ಘಾಟಿಸಲಾದ ಬೃಹತ್ ಅಭಿವೃದ್ಧಿ ಪ್ಯಾಕೇಜ್ ಕುಡಿಯುವ ನೀರು, ನೀರಾವರಿ, ತಾಂತ್ರಿಕ ಶಿಕ್ಷಣ, ಇಂಧನ, ನಗರಾಭಿವೃದ್ಧಿ, ಕ್ರೀಡೆ ಮತ್ತು ಕೌಶಲ್ಯ ಅಭಿವೃದ್ಧಿ ಸೇರಿದಂತೆ ನಿರ್ಣಾಯಕ ಕ್ಷೇತ್ರಗಳನ್ನು ಒಳಗೊಂಡಿದೆ.
ಹೆಚ್ಚುವರಿಯಾಗಿ, ಅವರು 28,000 ರೈತರಿಗೆ ಬೆಳೆ ವಿಮಾ ಪ್ರಯೋಜನಗಳಿಗಾಗಿ 62 ಕೋಟಿ ರೂ.ಗಳನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು.
ಬದ್ರಿ ಹಸುವಿನ ತುಪ್ಪಕ್ಕೆ ಇತ್ತೀಚೆಗೆ GI ಟ್ಯಾಗ್ ಸಿಕ್ಕಿರುವುದನ್ನು ಪ್ರಧಾನಿ ಮೋದಿ ಶ್ಲಾಘಿಸಿದರು ಮತ್ತು ಇದನ್ನು ಒಂದು ಪ್ರಮುಖ ಸಾಧನೆ ಎಂದು ಕರೆದರು. ಬದ್ರಿ ಹಸು ಉತ್ತರಾಖಂಡದ ಹಳ್ಳಿಗಳ ಪ್ರತಿಯೊಂದು ಮನೆಯ ಹೆಮ್ಮೆ ಎಂದು ಹೇಳಿದರು.
Advertisement