

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಕಾರು ಸ್ಫೋಟಗೊಂಡು 13ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ದೇಶಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೆಹಲಿ ಪೊಲೀಸ್ ಮುಖ್ಯಸ್ಥರು ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು ಎಂದು ಮೂಲಗಳು ತಿಳಿಸಿವೆ.
ತನಿಖೆಗೆ ಸಹಾಯ ಮಾಡಲು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ಸ್ಫೋಟ ನಡೆದ ಸ್ಥಳಕ್ಕೆ ತಜ್ಞ ತಂಡಗಳನ್ನು ಕಳುಹಿಸುವಂತೆ ರಾಷ್ಟ್ರೀಯ ಭದ್ರತಾ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ವಿಧಿವಿಜ್ಞಾನ ಮುಖ್ಯಸ್ಥರಿಗೆ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ಸ್ಫೋಟದ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಲು ಗೃಹ ಸಚಿವರು ದೆಹಲಿ ಪೊಲೀಸ್ ಆಯುಕ್ತರು, ಗುಪ್ತಚರ ಬ್ಯೂರೋ ನಿರ್ದೇಶಕರು ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅವರೊಂದಿಗೆ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮೂವರು ಉನ್ನತ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದ್ದು, ಎನ್ಐಎ ಮತ್ತು ಎನ್ ಎಸ್ ಜಿಗೆ ತನಿಖೆಗೆ ಕೈಜೋಡಿಸುವಂತೆ ಅಮಿತ್ ಶಾ ಸೂಚಿಸಿದ್ದು, ಅಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎನ್‌ಎಸ್‌ಜಿ ತಂಡವು ಸ್ಫೋಟಕ ತಜ್ಞರನ್ನು ಒಳಗೊಂಡಿದ್ದು, ಎನ್‌ಐಎ ತಂಡವು ಭಯೋತ್ಪಾದನಾ ಪ್ರಕರಣಗಳಲ್ಲಿ ಅನುಭವಿ ತನಿಖಾಧಿಕಾರಿಗಳನ್ನು ಒಳಗೊಂಡಿದೆ.
ಹುಂಡೈ I20 ಕಾರಿನಲ್ಲಿ ಸ್ಫೋಟ
ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಮಿತ್ ಶಾ ಅವರು ಖಚಿತಪಡಿಸಿದ್ದಾರೆ.
ಸ್ಫೋಟದ ಮಾಹಿತಿ ಬಂದ ಹತ್ತೇ ನಿಮಿಷಗಳಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್ ಮತ್ತು ದೆಹಲಿ ಸ್ಪೆಷಲ್ ಸೆಲ್‌ನ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳೂ ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಗೆ ಅಮಿತ್ ಶಾ ಭೇಟಿ
ಘಟನಾ ಸ್ಥಳದ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಹಾಗೂ ವಿಶೇಷ ಘಟಕದಿಂದ ಮಾಹಿತಿ ಪಡೆದ ಅಮಿತ್ ಶಾ, ನಂತರ ಲೋಕನಾಯಕ್ ಆಸ್ಪತ್ರೆಗೆ ಭೇಟಿ, ಗಾಯಗೊಂಡವರ ಆರೋಗ್ಯ ವಿಚಾರಿಸಿದರು.
ಕಾರು ಸ್ಫೋಟದ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಕಾರು ಮಾಲೀಕ ವಶಕ್ಕೆ
ಸ್ಫೋಟಗೊಂಡ ಹರಿಯಾಣ ನೋಂದಣಿ ಇರುವ ಹುಂಡೈ I20 ಕಾರಿನ ಮಾಲೀಕ ಸಲ್ಮಾನ್ ಎಂಬುವವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
Advertisement