

ನವದೆಹಲಿ: ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಸಮೀಪ ಸೋಮವಾರ ರಾತ್ರಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಮಾಲೀಕನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಮೂಲಗಳು ತಿಳಿಸಿವೆ.
ಸ್ಫೋಟಗೊಂಡ ಕಾರು ದಕ್ಷಿಣ ಕಾಶ್ಮೀರದ ಪುಲ್ವಾಮಾದ ವೈದ್ಯನೊಬ್ಬನಿಗೆ ಸೇರಿದ್ದಾಗಿದೆ, ಆತನೂ ಕೂಡ ಈ ಪಿತೂರಿಯ ಭಾಗವಾಗಿದ್ದ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪುಲ್ವಾಮಾದಲ್ಲಿ ತಾರಿಕ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರಂಭಿಕ ವಿಚಾರಣೆಯಲ್ಲಿ ದಾಳಿಯಲ್ಲಿ ಬಳಸಲಾದ ವಾಹನವು ಹಲವು ಬಾರಿ ಕೈ ಬದಲಾಗಿದೆ ಎಂದು ತಿಳಿದುಬಂದಿದೆ. ಕಾರನ್ನು ಮೊದಲು ಆಮಿರ್ ಎಂಬ ವ್ಯಕ್ತಿಗೆ ಮಾರಾಟ ಮಾಡಲಾಯಿತು, ನಂತರ ತಾರಿಕ್ ಬಳಿಯಿಂದ ಅಂತಿಮವಾಗಿ ಉಮರ್‌ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ವಿಚಾರಣೆ ಮುಂದುವರಿದಿದ್ದು ಮಂಗಳವಾರ ಮಧ್ಯಾಹ್ನದ ವೇಳೆಗೆ ಸ್ಪಷ್ಟ ವಿವರಗಳು ಹೊರಬರುವ ನಿರೀಕ್ಷೆಯಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ಪೊಲೀಸ್ ತಂಡಗಳು ಫರಿದಾಬಾದ್‌ನ ಎರಡು ಮನೆಗಳಿಂದ ಸಾವಿರಾರು ಕಿಲೋಗಳಷ್ಟು ಶಂಕಿತ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ಸ್ಫೋಟ ಸಂಭವಿಸಿದೆ. ಎರಡೂ ಮನೆಗಳನ್ನು ಡಾ. ಮುಜಮ್ಮಿಲ್ ಶಕೀಲ್ ಬಾಡಿಗೆಗೆ ಪಡೆದಿದ್ದ.
ನಿಧಾನವಾಗಿ ಚಲಿಸುತ್ತಿದ್ದ ವಾಹನವೊಂದು ಕೆಂಪು ದೀಪದ ಬಳಿ ನಿಂತಿತು, ಆ ವಾಹನದಲ್ಲಿ ಸ್ಫೋಟ ಸಂಭವಿಸಿತು. ಸ್ಫೋಟದಿಂದಾಗಿ ಹತ್ತಿರದ ವಾಹನಗಳಿಗೂ ಹಾನಿಯಾಗಿದೆ ಎಂದು ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾತಿಳಿಸಿದರು. ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶವು ಜನದಟ್ಟಣೆಯಿಂದ ಕೂಡಿದ್ದು, ಚಾಂದನಿ ಚೌಕ್ ಮಾರುಕಟ್ಟೆಯೂ ಸಹ ಇದೆ, ಇದು ನಗರದ ಅತ್ಯಂತ ಜನನಿಬಿಡ ಮತ್ತು ಜನದಟ್ಟಣೆಯಿಂದ ಕೂಡಿದೆ.
Advertisement