

ಜೈಪುರ: ರಾಜಸ್ಥಾನದ ಐಎಎಸ್ ಅಧಿಕಾರಿ ಭಾರತಿ ದೀಕ್ಷಿತ್ ಅವರು ತಮ್ಮ ಪತಿ, ಐಎಎಸ್ ಅಧಿಕಾರಿ ಆಶಿಶ್ ಮೋದಿ ಅವರ ವಿರುದ್ಧ ಸಲ್ಲಿಸಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ರಾಜಸ್ಥಾನದ ಆಡಳಿತಶಾಹಿಯಲ್ಲಿ ದೊಡ್ಡ ವಿವಾದ ಭುಗಿಲೆದ್ದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾರತಿ ದೀಕ್ಷಿತ್ ಅವರು ನವೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಮೋದಿ ಅವರು 2014 ರಲ್ಲಿ ಸುಳ್ಳು ಹೇಳುವ ಮೂಲಕ ತಮ್ಮ ಕುಟುಂಬವನ್ನು ಭಾವನಾತ್ಮಕವಾಗಿ ವಂಚಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ತಂದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾಗ ನಾನು ಭಾವನಾತ್ಮಕವಾಗಿ ದುರ್ಬಲವಾಗಿದ್ದೆ. ಇದನ್ನು ದುರುಪಯೋಗಪಡಿಸಿಕೊಂಡ ಅವರು, ತಮ್ಮ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡಿದರು ಮತ್ತು ನಂತರ ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದರು ಎಂದು ಅವರು ಆರೋಪಿಸಿದ್ದಾರೆ.
ಮೋದಿಗೆ ಮೂಲತಃ ನಾಗಾಲ್ಯಾಂಡ್ ಕೇಡರ್ ಅನ್ನು ನೀಡಲಾಗಿತ್ತು. ಆದರೆ ರಾಜಸ್ಥಾನ ಕೇಡರ್‌ಗೆ ವರ್ಗಾವಣೆ ಪಡೆಯಲು ತನ್ನನ್ನು ಮದುವೆಯಾದರು ಎಂದು ದೀಕ್ಷಿತ್ ಆರೋಪಿಸಿದ್ದಾರೆ.
ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಆರೋಪ ಮಾಡಿರುವ ಭಾರತಿ ದೀಕ್ಷಿತ್ ಅವರು, ಅವರು ಆಗಾಗ್ಗೆ ಮದ್ಯ ಸೇವಿಸಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. 2018 ರಲ್ಲಿ ಮಗಳು ಹುಟ್ಟಿದ ನಂತರ ಅವರ ದೌರ್ಜನ್ಯ ಹೆಚ್ಚಾಯಿತು. ಇದರಿಂದಾಗಿ ತಾತ್ಕಾಲಿಕವಾಗಿ ಜೈಪುರವನ್ನು ತೊರೆಯಬೇಕಾಯಿತು ಎಂದು ದೀಕ್ಷಿತ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
2025 ರ ಅಕ್ಟೋಬರ್‌ನಲ್ಲಿ, ಮೋದಿ ಮತ್ತು ಅವರ ಸಹಚರರು ಸರ್ಕಾರಿ ವಾಹನದಲ್ಲಿ ತಮ್ಮನ್ನು ಅಪಹರಿಸಿ, ಹಲವಾರು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ವಿಚ್ಛೇದನಕ್ಕೆ ಒಪ್ಪದಿದ್ದರೆ ತಮ್ಮನ್ನು ಮತ್ತು ತನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ತಮ್ಮ ಕೋಣೆಯಲ್ಲಿ ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದಾರೆ ಮತ್ತು ಗೌಪ್ಯ ಸರ್ಕಾರಿ ದಾಖಲೆಗಳನ್ನು ಪಡೆಯಲು ತಮ್ಮ ಮೊಬೈಲ್ ಫೋನ್ ಅನ್ನು ಇತರ ಸಾಧನಗಳಿಗೆ ಅಕ್ರಮವಾಗಿ ಸಂಪರ್ಕಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವೈಯಕ್ತಿಕ ಮತ್ತು ಅಪರಾಧ ಕೃತ್ಯಗಳಿಗಾಗಿ ಅವರು ತಮ್ಮ ಹುದ್ದೆ ಮತ್ತು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತಿ ದೀಕ್ಷಿತ್ ಅವರು ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 85(ಬಲವಂತದ ಮದುವೆ), 308(2), 127(2), 140(3), ಮತ್ತು 61(2) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66, 66C, ಮತ್ತು 66D ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ರಾಮಕೇಶ್ ಅವರು ತಿಳಿಸಿದ್ದಾರೆ.
Advertisement