

ತನ್ನ ಸಹೋದರಿಗೆ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಪರ್ಕವಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಬಂಧಿತ ವೈದ್ಯೆ ಶಾಹೀನ್ ಸಯೀದ್ ಅವರ ಹಿರಿಯ ಸಹೋದರ, "ಶಾಹೀನ್ ಕಾನೂನುಬಾಹಿರವಾದ ಯಾವುದೇ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂಬುದನ್ನು ಒಪ್ಪಿಕೊಳ್ಳಲು ತಮ್ಮ ಕುಟುಂಬ ಇನ್ನೂ ಹೆಣಗಾಡುತ್ತಿದೆ" ಎಂದು ಹೇಳಿದರು.
ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಕೆಯ ಮಾಜಿ ಪತಿ ಮಾತನಾಡಿದ್ದು, ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾಗ ಆಕೆ ಬುರ್ಖಾ ಸಹ ಧರಿಸುತ್ತಿರಲಿಲ್ಲ. ತಮ್ಮ ಮಕ್ಕಳಿಗೆ ಪ್ರೀತಿಯ ತಾಯಿಯಾಗಿದ್ದರು ಮತ್ತು ಉತ್ತಮ ಜೀವನಕ್ಕಾಗಿ ವಿದೇಶಕ್ಕೆ ಹೋಗಲು ಬಯಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ 12 ಜನರು ಸಾವನ್ನಪ್ಪಿ ಸುಮಾರು 20 ಜನರು ಗಾಯಗೊಂಡ ಸ್ಫೋಟದ ಎರಡು ದಿನಗಳ ನಂತರ ಲಕ್ನೋದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಹೀನ್ ಅವರ ಸಹೋದರ ಮೊಹಮ್ಮದ್ ಶೋಯೆಬ್, ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ತಮ್ಮ ಮನೆಗೆ ಭೇಟಿ ನೀಡಿದ್ದಾರೆ ಆದರೆ ಕುಟುಂಬವನ್ನು ಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
"ತನಿಖಾಧಿಕಾರಿಗಳು ಮನೆಯನ್ನು ಶೋಧಿಸಿ, ನೀವು ಈಗ ನನ್ನನ್ನು ಕೇಳುತ್ತಿರುವಂತೆಯೇ ಪ್ರಶ್ನೆಗಳನ್ನು ಕೇಳಿದರು ಎಂದು ಶೋಯೆಬ್ ಹೇಳಿದ್ದಾರೆ.
"ತನಿಖಾಧಿಕಾರಿಗಳು ನನ್ನ ತಂದೆ ಅಥವಾ ನನ್ನನ್ನು ಕಠಿಣವಾಗಿ ನಡೆಸಿಕೊಂಡಿಲ್ಲ. ನಮ್ಮನ್ನು ಏನನ್ನೂ ಹೇಳಲು ಯಾವುದೇ ಒತ್ತಡ ಅಥವಾ ಬಲಪ್ರಯೋಗ ಮಾಡಲಾಗಿಲ್ಲ. ನನ್ನ ಸಹೋದರಿ ನಮ್ಮನ್ನು ಭೇಟಿ ಮಾಡುವುದನ್ನು ನಿಲ್ಲಿಸಿದ ವಿಷಯವಾಗಿ ಮಾತ್ರ ಕೇಳಿದರು." ಎಂದು ತಿಳಿಸಿದ್ದಾರೆ.
ನನ್ನ ಸಹೋದರಿ ಮತ್ತು ನಾನು ಕಳೆದ ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿಲ್ಲ ಎಂದು ಶೋಯೆಬ್ ವಿಚಾರಣೆ ವೇಳೆ ಹೇಳಿದ್ದಾರೆ. "ನಮಗೆ ಯಾವುದೇ ಸಂಪರ್ಕವಿಲ್ಲ. ನಾವು ಕೊನೆಯದಾಗಿ ಮಾತನಾಡಿ ನಾಲ್ಕು ವರ್ಷಗಳಾಗಿವೆ," ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಅವರ ಪೋಷಕರು ಸಾಂದರ್ಭಿಕವಾಗಿ ಆಕೆಯೊಂದಿಗೆ ಮಾತನಾಡುತ್ತಿದ್ದರು. ಎಂದು ಶೋಯೆಬ್ ಹೇಳಿದ್ದಾರೆ.
"ಪೋಷಕರು ಸ್ವಾಭಾವಿಕವಾಗಿ ತಮ್ಮ ಮಕ್ಕಳು ಹೇಗಿದ್ದಾರೆಂದು ಕೇಳಲು ಕರೆ ಮಾಡುತ್ತಿದ್ದರು. ನಾನು ಅವಳ ಅಣ್ಣ, ಖಂಡಿತ, ನಾನು ಅವಳ ಬಗ್ಗೆಯೂ ಚಿಂತೆ ಮಾಡುತ್ತೇನೆ. ಅದು ಸಾಮಾನ್ಯವಲ್ಲವೇ?" ಅವರು ಹೇಳಿದರು.
ಲಕ್ನೋದ ಐಐಎಂ ರಸ್ತೆಯ ಬಳಿಯಿರುವ ಅವರ ನಿವಾಸಕ್ಕೆ ಅವರು ಎಂದಾದರೂ ಭೇಟಿ ನೀಡಿದ್ದಾರೆಯೇ ಎಂದು ಕೇಳಿದಾಗ, ಶೋಯೆಬ್ ನಕಾರಾತ್ಮಕವಾಗಿ ಉತ್ತರಿಸಿದರು. "ಇಲ್ಲ, ನಾನು ಎಂದಿಗೂ ಅಲ್ಲಿಗೆ ಹೋಗಿಲ್ಲ. ಅವರಿಗೆ ಐಐಎಂ ರಸ್ತೆಯ ಪಕ್ಕದಲ್ಲಿ ಎಲ್ಲೋ ಒಂದು ಮನೆ ಇದೆ ಎಂದು ನನಗೆ ಮಾತ್ರ ತಿಳಿದಿತ್ತು. ನನಗೆ ನಿಖರವಾದ ಸ್ಥಳವೂ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ.
ಶೋಯೆಬ್ ಅವರ ಚಟುವಟಿಕೆಗಳ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ನಿರಾಕರಿಸಿದರು. "ಅವಳು ವೈದ್ಯಕೀಯ ಅಧ್ಯಯನ ಮಾಡುತ್ತಿದ್ದಾಗಲೂ, ಅವಳು ಯಾವುದೇ ಅನುಮಾನಾಸ್ಪದ ಕೆಲಸದಲ್ಲಿ ಭಾಗಿಯಾಗಿರುವ ಯಾವುದೇ ಸೂಚನೆ ಇರಲಿಲ್ಲ. ನಾನು ಇನ್ನೂ ಈ ಆರೋಪಗಳನ್ನು ನಂಬುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಶಾಹೀನ್ ಅವರ ಮಾಜಿ ಪತಿ ಡಾ. ಜಾಫರ್ ಹಯಾತ್ ಬುಧವಾರ ಕಾನ್ಪುರದಲ್ಲಿ ಪಿಟಿಐ ಜೊತೆ ಮಾತನಾಡಿದ್ದು, ಪ್ರಕರಣದಲ್ಲಿ ಅವರ ಭಾಗಿಯಾಗುವಿಕೆಯ ಬಗ್ಗೆ ನನಗೆ ನಿನ್ನೆ ಸಂಜೆಯಷ್ಟೇ ತಿಳಿಯಿತು ಎಂದು ಹೇಳಿದ್ದಾರೆ.
ಹಯಾತ್ ಮತ್ತು ಶಾಹೀನ್ ನವೆಂಬರ್ 2003 ರಲ್ಲಿ ವಿವಾಹವಾಗಿದ್ದರು ಮತ್ತು ಇಬ್ಬರೂ ಪ್ರತ್ಯೇಕವಾಗಿ ವೈದ್ಯಕೀಯ ಅಧ್ಯಯನವನ್ನು ಮಾಡಿದ್ದರು. "ನಾವು 2012 ರ ಅಂತ್ಯದ ವೇಳೆಗೆ ವಿಚ್ಛೇದನ ಪಡೆದುಕೊಂಡೆವು. ಅವಳ ಮನಸ್ಸಿನಲ್ಲಿ ಏನಿತ್ತು ಎಂದು ನನಗೆ ಖಚಿತವಿಲ್ಲ. ನಮ್ಮ ನಡುವೆ ಯಾವುದೇ ವಿವಾದ ಅಥವಾ ಜಗಳ ಇರಲಿಲ್ಲ. ಅವಳು ಪ್ರೀತಿಯ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿದ್ದಳು" ಎಂದು ಅವರು ಹೇಳಿದರು.
ವಿಚ್ಛೇದನದ ನಂತರ ಅವರ ನಡುವೆ ಯಾವುದೇ ಸಂಪರ್ಕವಿಲ್ಲ ಎಂದು ಅವರು ಹೇಳಿದರು. "ಅವಳು ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಬಹುದೆಂದು ನನಗೆ ಎಂದಿಗೂ ತಿಳಿದಿರಲಿಲ್ಲ. ಅವಳು ತನ್ನ ಕುಟುಂಬ ಮತ್ತು ಮಕ್ಕಳೊಂದಿಗೆ ಆಳವಾಗಿ ಬಾಂಧವ್ಯ ಹೊಂದಿದ್ದಳು, ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದಳು ಮತ್ತು ಅವರ ಅಧ್ಯಯನದತ್ತ ಹೆಚ್ಚು ಗಮನ ಕೊಡುತ್ತಿದ್ದಳು" ಎನ್ನುತ್ತಾರೆ ಹಯಾತ್.
ತಮ್ಮ ಮದುವೆಯನ್ನು ನೆನಪಿಸಿಕೊಳ್ಳುತ್ತಾ, ಮದುವೆಯ ಆಚರಣೆಗಳ ಸಮಯದಲ್ಲಿ ಹೊರತುಪಡಿಸಿ ಶಾಹೀನ್ ಎಂದಿಗೂ ಬುರ್ಖಾ ಧರಿಸಿರಲಿಲ್ಲ ಎಂದು ಹೇಳಿದರು. "ನಾನು ಅವಳನ್ನು ಬುರ್ಖಾದಲ್ಲಿ ಎಂದಿಗೂ ನೋಡಿರಲಿಲ್ಲ. ಈಗ ವರದಿಯಾಗುತ್ತಿರುವ ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅವಳು ಭಾಗಿಯಾಗಿದ್ದಾಳೆಂದು ನನಗೆ ತಿಳಿದಿಲ್ಲ. ನಮ್ಮ ವಿಚ್ಛೇದನವು ಬಹಳ ಹಿಂದೆಯೇ, 2012 ರಲ್ಲಿ ಸಂಭವಿಸಿದೆ ಮತ್ತು ಅವಳು ನಂತರ ಏನಾದರೂ ತೊಡಗಿಸಿಕೊಂಡಿದ್ದರೆ, ಅದರ ಬಗ್ಗೆ ನನಗೆ ಏನೂ ತಿಳಿದಿಲ್ಲ" ಎಂದು ಅವರು ಹೇಳಿದರು.
Advertisement