

ಲಖನೌ: ಇತ್ತೀಚಿನ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ಶಾಹೀನ್ ಮತ್ತು ಪರ್ವೇಜ್ ಅಮಾಯಕರು ಎಂದು ಅವರು ಕುಟುಂಬಸ್ಥರು ಹೇಳಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ಶಾಹೀನ್ ಅವರ ಸಹೋದರ ಮೊಹಮ್ಮದ್ ಶೋಯೆಬ್, ತಮ್ಮ ಸಹೋದರ ಮತ್ತು ಸಹೋದರಿ ಇಬ್ಬರೂ ಕಳೆದ ಮೂರು ವರ್ಷಗಳಿಂದ ಕುಟುಂಬದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಅವರು ಯಾವುದೇ ತಪ್ಪು ಮಾಡಿರುವಂತಹ ಸಾಧ್ಯತೆ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
"ನನ್ನ ಸಹೋದರ ಮತ್ತು ಸಹೋದರಿ ನಿರಪರಾಧಿಗಳು. ಕಳೆದ ಮೂರು ವರ್ಷಗಳಿಂದ ಅವರು ನಮ್ಮ ಕುಟುಂಬ ವಿಷಯಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಅವರ ಚಟುವಟಿಕೆಗಳು ಅಥವಾ ಸಂಬಂಧಗಳ ಬಗ್ಗೆ ನಮಗೆ ಸಂಪೂರ್ಣವಾಗಿ ತಿಳಿದಿಲ್ಲ. ಅವರ ಹೆಸರುಗಳನ್ನು ಪ್ರಕರಣದಲ್ಲಿ ಸೇರಿಸಿರುವುದು ಆಘಾತ ಮೂಡಿಸಿದೆ ಎಂದರು
ನಮ್ಮ ಕುಟುಂಬ ಲಖನೌದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದೆ. ಶಾಹೀನ್ ಮತ್ತು ಪರ್ವೇಜ್ ಅವರೊಂದಿಗೆ ಹೆಚ್ಚಿನ ಸಂಪರ್ಕವಿಲ್ಲ. ಅವರು ಬಹಳ ಹಿಂದೆಯೇ ಬೇರ್ಪಟ್ಟರು ಮತ್ತು ಬೇರೆಡೆ ವಾಸಿಸುತ್ತಿದ್ದರು. ನಾವು ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದೇವೆ ಮತ್ತು ತನಿಖೆಯಲ್ಲಿ ನಂಬಿಕೆ ಇಡುತ್ತೇವೆ" ಎಂದು ಅವರು, ಮಾಧ್ಯಮ ಮತ್ತು ಸಾರ್ವಜನಿಕರು ಆತುರದ ತೀರ್ಮಾನಗಳಿಗೆ ಬರದಂತೆ ಮನವಿ ಮಾಡಿದರು.
"ಮಾಧ್ಯಮಗಳಲ್ಲಿ ಎಷ್ಟು ತೋರಿಸಲಾಗುತ್ತಿದೆ ಎಂಬುದು ನನಗೆ ಮಾತ್ರ ತಿಳಿದಿದೆ. ಆಕೆ ದೆಹಲಿ ಸ್ಪೋಟದಲ್ಲಿ ಭಾಗಿಯಾಗಿದ್ದಾಳೆಂದು ಹೇಳಲಾಗುತ್ತಿದೆ, ಏಜೆನ್ಸಿಗಳಿಗೆ ಮಾತ್ರ ಆಕೆ ಏನು ಎಂಬುದು ತಿಳಿದಿದೆ. ಉತ್ತಮ ಶಿಕ್ಷಣ ಪಡೆದಿದ್ದ ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಆಕೆಯಷ್ಟು ನಾನು ವ್ಯಾಸಂಗ ಮಾಡಲು ಸಾಧ್ಯವಾಗಿಲ್ಲ. ಇದನ್ನೂ ನಂಬಲು ಆಗುತ್ತಿಲ್ಲ ಎಂದರು.
ನನ್ನ ಮನೆಯಲ್ಲಿ ಶೋಧ ನಡೆಸಲಾಗಿದೆ. ಅವರಿಗೆ ಏನೂ ಸಿಕ್ಕಿಲ್ಲ. ನೀವು ನ್ಯಾಯಾಲಯದ ಆದೇಶ ತಂದರೂ ನಾನು ಇನ್ನು ಮುಂದೆ ಏನನ್ನೂ ಹೇಳುವುದಿಲ್ಲ. ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಶಾಹೀನ್ ತಂದೆ ತಿಳಿಸಿದರು.
ಸೋಮವಾರ, ಫರೀದಾಬಾದ್‌ನಲ್ಲಿ ನಡೆದ ತನಿಖೆಯ ಸಂದರ್ಭದಲ್ಲಿ 60 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ ಫಲಾಹ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಡಾ. ಮುಜಮ್ಮಿಲ್ ಗನೈ ಮತ್ತು ಡಾ. ಶಾಹೀನ್ ಸಯೀದ್ ಅವರನ್ನು ಬಂಧಿಸಲಾಗಿದೆ.
Advertisement