

ನವದೆಹಲಿ: ಕೆಂಪು ಕೋಟೆಯ ಬಳಿ ಸ್ಫೋಟಗೊಂಡ, ಸ್ಫೋಟಕಗಳಿಂದ ತುಂಬಿದ ಕಾರನ್ನು ಚಲಾಯಿಸುತ್ತಿದ್ದ ಡಾ. ಉಮರ್ ನಬಿ, ಡಿಸೆಂಬರ್ 6 ರಂದು ಬಾಬರಿ ಮಸೀದಿ ಧ್ವಂಸ ವಾರ್ಷಿಕ ದಿನದಂದು ಪ್ರಬಲ ಸ್ಫೋಟವನ್ನು ಯೋಜಿಸಿದ್ದ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಫರಿದಾಬಾದ್‌ನಲ್ಲಿ ಕೇಂದ್ರೀಕೃತವಾಗಿರುವ ಅಂತರರಾಜ್ಯ 'ವೈಟ್ ಕಾಲರ್' ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಘಟಕದೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಜನರನ್ನು ವಿಚಾರಣೆ ನಡೆಸಿ ಅವರ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಮಾತನಾಡಿದ ನಂತರ ಯೋಜನೆಯ ವಿವರಗಳು ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ಕೋಟೆ ಬಳಿ ನವೆಂಬರ್ 10 ರಂದು ಸಂಭವಿಸಿದ ಸ್ಫೋಟದಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಾರನ್ನು ಸ್ಫೋಟಿಸಿರುವ 28 ವರ್ಷದ ವೈದ್ಯ ಉಮರ್, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮೂಲದವನಾಗಿದ್ದು, ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿರುವ ಭಯೋತ್ಪಾದಕ ಜಾಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ.
ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧಕನಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮುಜಮ್ಮಿಲ್ ಅಹ್ಮದ್ ಗನೈ ಅಲಿಯಾಸ್ ಮುಸೈಬ್ ನ ಕೊಠಡಿಯಿಂದ 360 ಕೆಜಿ ಅಮೋನಿಯಂ ನೈಟ್ರೇಟ್ ಪತ್ತೆಯಾಗಿ, ಆತನ ಬಂಧನದೊಂದಿಗೆ ಈ ಉಗ್ರ ವೈದ್ಯರ ಗುಂಪಿನ ಯೋಜನೆ ವಿಫಲವಾಗಿದೆ.
ಉಮರ್ ಭಯಭೀತರಾಗಿದ್ದರು ಮತ್ತು ಸ್ಫೋಟ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಉಮರ್ ಒಬ್ಬ ಒಂಟಿಯಾಗಿದ್ದನು ಮತ್ತು ಅತ್ಯುತ್ತಮ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದನು.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಬಂಧಿಸಲ್ಪಟ್ಟ ಎಂಟು ಜನರಲ್ಲಿ ಮೊದಲಿಗನಾದ ಗನೈ ಜೊತೆ 2021 ರಲ್ಲಿ ಟರ್ಕಿಗೆ ಪ್ರವಾಸ ನಾಟಕೀಯ ಪರಿವರ್ತನೆ ಮತ್ತು ಮೂಲಭೂತವಾದಕ್ಕೆ ತಿರುಗಲು ಕಾರಣವಾಯಿತು ಎಂದು ಆತ ಹೇಳಿದ್ದಾರೆ.
ಪ್ರವಾಸದ ಸಮಯದಲ್ಲಿ ಇಬ್ಬರೂ ನಿಷೇಧಿತ ಜೆಇಎಂನ ಭೂಗತ ಕಾರ್ಯಕರ್ತರನ್ನು ಭೇಟಿಯಾಗಿದ್ದರು ಎಂದು ನಂಬಲಾಗಿದೆ. ಇನ್ನು ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ನ.21 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ, ಇದಕ್ಕೂ ಮುನ್ನ ದೇಶದ ಹಲವೆಡೆ ಬಾಂಬ್ ಸ್ಫೋಟ ನಡೆಸಲು ಉದ್ದೇಶಿಸಲಾಗಿತ್ತು ಎಂದು ತಿಳಿದುಬಂದಿದೆ.
Advertisement