

ನವದಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಸಾಕಷ್ಟು ಮಾಹಿತಿಗಳನ್ನು ಹೊರತೆಗೆಯುತ್ತಿದ್ದಾರೆ. ದೆಹಲಿ ಪೊಲೀಸರು ಸುಮಾರು 50 ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ದೆಹಲಿ ಸ್ಫೋಟದ ಆರೋಪಿ ಡಾ. ಉಮರ್ ನವೆಂಬರ್ 10 ರಂದು ಕೆಂಪು ಕೋಟೆ ಆವರಣ ತಲುಪುವ ಮುನ್ನ ದೆಹಲಿಯ ಹಲವು ಕಡೆಗಳಲ್ಲಿ ಸುತ್ತಾಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿ ಪೊಲೀಸರ ಮ್ಯಾಪಿಂಗ್ ಪ್ರಕಾರ, ಸ್ಫೋಟದ ಆರೋಪಿ ಮಧ್ಯಾಹ್ನ 3 ಗಂಟೆಯ ಮುನ್ನ ದೆಹಲಿಯ ಅನೇಕ ಕಡೆಗಳಲ್ಲಿ ಕಾರು ಚಲಾಯಿಸಿದ್ದ ಎನ್ನಲಾಗಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಡಾ. ಉಮರ್ ದೃಶ್ಯಗಳು ಸೆರೆಯಾಗಿವೆ.
ಮಸೀದಿಗೆ ಭೇಟಿ! ಮೂಲಗಳ ಪ್ರಕಾರ ಆತ ಫರಿದಾಬಾದ್‌ನಿಂದ ತೆರಳುವಾಗ ಆಗ್ನೇಯ ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದಾನೆ. ಬದರ್ಪುರ್ ಗಡಿಯ ಮೂಲಕ ದೆಹಲಿ ತಲುಪಿದ್ದಾನೆ. ಆಗ್ನೇಯ ಜಿಲ್ಲೆಯಿಂದ, ಪೂರ್ವ ಜಿಲ್ಲೆಗೆ, ನಂತರ ಕೇಂದ್ರ ಜಿಲ್ಲೆಯ ರಿಂಗ್ ರಸ್ತೆಗೆ ಹೋಗಿದ್ದಾನೆ. ಅಲ್ಲಿಂದ ಉತ್ತರ ಜಿಲ್ಲೆಗೆ ಹೋಗಿದ್ದು, ನಂತರ ವಾಯುವ್ಯ ಜಿಲ್ಲೆಯ ಅಶೋಕ್ ವಿಹಾರ್‌ಗೆ ಹೋಗಿದ್ದಾನೆ. ಅಲ್ಲಿ ಊಟ ಮಾಡಲು ಕಾರು ನಿಲ್ಲಿಸಿದ್ದಾನೆ. ಅಲ್ಲಿಂದ ಆತ ಸೆಂಟ್ರಲ್ ಜಿಲ್ಲೆಗೆ ವಾಪಾಸ್ಸಾಗಿದ್ದು, ಅಲ್ಲಿ ಮಸೀದಿಗೆ ಭೇಟಿ ನೀಡಿದ್ದಾನೆ.
ರಾತ್ರಿಯಿಡೀ ಕಾರಿನಲ್ಲಿಯೇ ಕಳೆದಿದ್ದ ಆರೋಪಿ
ಮಧ್ಯಾಹ್ನ 3:19 ಕ್ಕೆ ಉತ್ತರ ಜಿಲ್ಲೆಯ ಕೆಂಪು ಕೋಟೆ ಪಾರ್ಕಿಂಗ್ ಸ್ಥಳವನ್ನು ತಲುಪಿದ್ದಾನೆ. ಇದಲ್ಲದೆ, ಫರಿದಾಬಾದ್‌ನಿಂದ ತಪ್ಪಿಸಿಕೊಂಡ ನಂತರ ಆರೋಪಿ ಡಾ. ಉಮರ್ ಮೇವತ್ ಮೂಲಕ ಫಿರೋಜ್‌ಪುರ್ ಝಿರ್ಕಾ ತಲುಪಿದ್ದಾನೆ. ನಂತರ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ದೆಹಲಿಗೆ ವಾಪಾಸ್ಸಾಗಿದ್ದ ಎಂದು ಮೂಲಗಳು ಹೇಳಿವೆ. ಆತ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ಬಸ್ ನಿಲ್ದಾಣದಲ್ಲಿ ಕಾರು ನಿಲ್ಲಿಸಿ ರಾತ್ರಿಯಿಡೀ ಕಾರಿನಲ್ಲಿಯೇ ಕಳೆದಿದ್ದ ಎನ್ನಲಾಗಿದೆ.
ಇಂದು ಮುಂಜಾನೆ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಮತ್ತು ದೆಹಲಿ ಪೊಲೀಸರ ಜಂಟಿ ತಂಡ ರಾಷ್ಟ್ರ ರಾಜಧಾನಿಯ ಸ್ಫೋಟ ಸ್ಥಳದ ಬಳಿಯ ನ್ಯೂ ಲಜಪತ್ ರಾಯ್ ಮಾರುಕಟ್ಟೆಯಲ್ಲಿ12 ಮೃತರ ಪೈಕಿ ಒಬ್ಬರ ದೇಹದ ಒಂದು ಭಾಗವನ್ನು ವಶಪಡಿಸಿಕೊಂಡಿದೆ. ಇದನ್ನು ತನಿಖೆಗೆ ನೆರವು ಆಗಲು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.
Advertisement