

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಅವರಿಗೆ ಕೋಲ್ಕತ್ತಾ ಹೈಕೋರ್ಟ್ ದೊಡ್ಡ ಹೊಡೆತ ನೀಡಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹಿರಿಯ ನಾಯಕನ ಶಾಸಕ ಸ್ಥಾನವನ್ನು ನ್ಯಾಯಾಲಯ ಇಂದು ರದ್ದುಗೊಳಿಸಿದೆ. ರಾಯ್ ಅವರು ಮೇ 2021ರಲ್ಲಿ ಭಾರತೀಯ ಜನತಾ ಪಕ್ಷದ (BJP) ಟಿಕೆಟ್ ನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಆ ವರ್ಷದ ಆಗಸ್ಟ್‌ನಲ್ಲಿ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಮುಕುಲ್ ರಾಯ್ ಟಿಎಂಸಿ ಪಕ್ಷವನ್ನು ಸೇರಿದ್ದರು.
ನ್ಯಾಯಮೂರ್ತಿ ದೇಬಾಂಗ್ಶು ಬಸಕ್ ನೇತೃತ್ವದ ವಿಭಾಗೀಯ ಪೀಠವು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಬಿಜೆಪಿ ಶಾಸಕಿ ಅಂಬಿಕಾ ರಾಯ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯಲ್ಲಿ ತೀರ್ಪು ನೀಡುತ್ತಾ ರಾಯ್ ಅವರನ್ನು ರಾಜ್ಯ ವಿಧಾನಸಭೆಯಿಂದ ಅನರ್ಹಗೊಳಿಸಿದೆ. ಪಕ್ಷಾಂತರ ವಿರೋಧಿ ಕಾನೂನಿನಡಿಯಲ್ಲಿ ಅನರ್ಹತೆ ಕೋರಿಕೆಯನ್ನು ವಜಾಗೊಳಿಸುವ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರ ನಿರ್ಧಾರವನ್ನು ಪ್ರಶ್ನಿಸಿ ಸುವೇಂದು ಅಧಿಕಾರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಟಿಕೆಟ್‌ನಲ್ಲಿ ಆಯ್ಕೆಯಾದ ನಂತರ ರಾಯ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ ಎಂದು ಸುವೇಂದು ಅಧಿಕಾರಿ ಆರೋಪಿಸಿದ್ದರು.
ಈ ನಿರ್ಧಾರವು ಬಹುಶಃ ಭಾರತೀಯ ಇತಿಹಾಸದಲ್ಲಿ "ಪಕ್ಷ ವಿರೋಧಿ" ಚಟುವಟಿಕೆಗಳ ಆರೋಪದ ಮೇಲೆ ಹೈಕೋರ್ಟ್ ಶಾಸಕರೊಬ್ಬರನ್ನು ಅನರ್ಹಗೊಳಿಸಿದ್ದು ಇದೇ ಮೊದಲು. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷರನ್ನಾಗಿ ಹಿರಿಯ ನಾಯಕನ ನೇಮಕವನ್ನು ದೋಷಪೂರಿತವೆಂದು ನ್ಯಾಯಾಲಯ ಘೋಷಿಸಿತು.
Advertisement