

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಕಾಯ್ದೆಯಡಿ ನೀಡಿರುವ ಸಮನ್ಸ್ ವಿಚಾರಣೆಗೆ ವರ್ಚ್ಯುವಲ್ ಆಗಿ ಹಾಜರಾಗುತ್ತೇನೆ ಎಂದು ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಖ್ಯಸ್ಥ ಅನಿಲ್ ಅಂಬಾನಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಹೇಳಿದ್ದಾರೆ.
ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಇ.ಡಿಗೆ ಪತ್ರ ಬರೆದಿದ್ದಾರೆ ಎಂದು ಅವರ ವಕ್ತಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆಮಾ ಕಾಯ್ದೆಯಡಿ ಹೇಳಿಕೆ ದಾಖಲಿಸಿಕೊಳ್ಳಲು ಖುದ್ದಾಗಿ ಹಾಜರಿರಬೇಕು ಎಂದು ಅಂಬಾನಿಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.
ಜೈಪುರ–ರೀಂಗಸ್ ಹೆದ್ದಾರಿ ಯೋಜನೆಲ್ಲಿ ಸುಮಾರು 100 ಕೋಟಿ ರು. ಹಣವನ್ನು ಹವಾಲ ಮಾರ್ಗದಲ್ಲಿ ವಿದೇಶಕ್ಕೆ ರವಾನಿಸಲಾಗಿದೆ ಎನ್ನುವ ಆರೋಪ ಪ್ರಕರಣದಲ್ಲಿ ಇ.ಡಿ ತನಿಖೆ ನಡೆಸುತ್ತಿದೆ.
ಪ್ರಕರಣ ಸಂಬಧ ಹವಾಲ ಡೀಲರ್‌ಗಳು ಸೇರಿದಂತೆ ಹಲವರ ಹೇಳಿಕೆ ದಾಖಲಿಸಿಕೊಂಡಿದ್ದ ಇ.ಡಿ ಬಳಿಕ ಅಂಬಾನಿಗೆ ಸಮನ್ಸ್ ಜಾರಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಅಂಬಾನಿ ಮತ್ತು ಅವರ ಕಂಪನಿಗಳ 7,500 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ, R-Infra ವಿರುದ್ಧ FEMA ಅಡಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಹೆದ್ದಾರಿ ಯೋಜನೆಯಿಂದ 40 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂದು ಕಂಡುಬಂದಿದೆ ಎಂದು ಹೇಳಲಾಗಿತ್ತು.
ಸೂರತ್ ಮೂಲದ ಶೆಲ್ ಕಂಪನಿಗಳ ಮೂಲಕ ದುಬೈಗೆ ಹಣವನ್ನು ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಈ ಜಾಡು 600 ಕೋಟಿ ರೂ.ಗಳನ್ನು ಮೀರಿದ ವ್ಯಾಪಕವಾದ ಅಂತರರಾಷ್ಟ್ರೀಯ ಹವಾಲಾ ಜಾಲವನ್ನು ಬಯಲಿಗೆಳೆದಿದೆ ಎಂದು ಏಜೆನ್ಸಿ ತಿಳಿಸಿದೆ.
Advertisement