

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಪ್ರಚಂಡ ಗೆಲುವು ಸಾಧಿಸಿದೆ. 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ NDA ಮುನ್ನಡೆ ಸಾಧಿಸಿದ್ದು ಬಹುತೇಕ ಆ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸಿವುದು ಖಚಿತವಾಗಿದೆ. ಇನ್ನು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದ RJD ಕಳಪೆ ಪ್ರದರ್ಶನ ನೀಡಿದೆ. ಇನ್ನು ತಾನೇ ಇಂಡಿ ಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದ ತೇಜಸ್ವಿ ಯಾದವ್ ಕೊನೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
RJD ಕುಟುಂಬದ ಭದ್ರಕೋಟೆ ರಾಘೋಪುರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ಸ್ಪರ್ಧಿಸಿದ್ದರು. ಅಲ್ಲಿ RJD ಗೆಲುವು ಸುಲಭ ಎಂದು ಹೇಳಲಾಗುತ್ತಿತ್ತು. ಆದರೆ ತೇಜಸ್ವಿ ಯಾದವ್ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ತಿಣುಕಾಡುವಂತಾಯಿತು. ಬಿಜೆಪಿಯ ಸತೀಶ್ ಕುಮಾರ್ ಕಠಿಣ ಸ್ಪರ್ಧೆ ನೀಡಿದ್ದರು. ಒಂದು ಹಂತದಲ್ಲಿ ತೇಜಸ್ವಿ ಯಾದವ್ ಗಿಂತ 9 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ ಹಂತದ ಮತ ಏಣಿಕೆಯಲ್ಲಿ ತೇಜಸ್ವಿ ಯಾದವ್ ಮತ್ತು ಸತೀಶ್ ಕುಮಾರ್ ನಡುವಿನ ಮತ ಅಂತರ ಕಡಿಮೆಯಾಗುತ್ತಾ ಬಂದಿತ್ತು. ಕೊನೆಯದಾಗಿ ತೇಜಸ್ವಿ ಯಾದವ್ 14,532 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತೇಜಸ್ವಿ ಯಾದವ್ 1,18,597 ಮತಗಳನ್ನು ಪಡೆದರೇ ಸತೀಶ್ ಕುಮಾರ್ 1,04,065 ಮತಗಳನ್ನು ಪಡೆದಿದ್ದಾರೆ.
ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ 202 ಕ್ಷೇತ್ರಗಳಲ್ಲಿ ಎನ್ ಡಿಎ ಪ್ರಚಂಡ ಮುನ್ನಡೆ ಸಾಧಿಸಿದೆ. ಇಂಡಿ ಕೂಟ ಕೇವಲ 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಆರ್ ಜೆಡಿ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಬಿಜೆಪಿ 90 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಜೆಡಿಯೂ 84 ಮತ್ತು ಎಲ್ ಜೆಪಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
Advertisement