

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, 202 ಸ್ಥಾನಗಳ ಗೆಲುವಿನ ಭಾರಿ ಬಹುಮತದೊಂದಿಗೆ ಎನ್‌ಡಿಎ ಮತ್ತೆ ಸರ್ಕಾರ ರಚಿಸುತ್ತಿದೆ.
ಫಲಿತಾಂಶದ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮೈತ್ರಿಕೂಟದ ಪಾಲುದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ಬೃಹತ್ ಬಹುಮತ" ಮೈತ್ರಿಕೂಟದ "ಐಕ್ಯತೆಯನ್ನು" ಪ್ರತಿಬಿಂಬಿಸುತ್ತದೆ ಎಂದು ನಿತೀಶ್ ಕುಮಾರ್ ಒತ್ತಿ ಹೇಳಿದ್ದಾರೆ.
X ನಲ್ಲಿ ಪೋಸ್ಟ್ ಮಾಡಿದ ನಿತೀಶ್, ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ರಾಷ್ಟ್ರೀಯ ಲೋಕ ಮೋರ್ಚಾ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಎಲ್ಲಾ ಎನ್‌ಡಿಎ ಸದಸ್ಯರ ಬೆಂಬಲದೊಂದಿಗೆ ಬಿಹಾರ ಈಗ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎಂದು ಅವರು ಪ್ರತಿಪಾದಿಸಿದರು.
"ಬಿಹಾರ ವಿಧಾನಸಭಾ ಚುನಾವಣೆ-2025 ರಲ್ಲಿ, ರಾಜ್ಯದ ಜನರು ನಮಗೆ ಭಾರಿ ಬಹುಮತವನ್ನು ನೀಡುವ ಮೂಲಕ ನಮ್ಮ ಸರ್ಕಾರದ ಮೇಲೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ, ರಾಜ್ಯದ ಎಲ್ಲಾ ಗೌರವಾನ್ವಿತ ಮತದಾರರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಂದ ಪಡೆದ ಬೆಂಬಲಕ್ಕಾಗಿ ನಾನು ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ, ಜೊತೆಗೆ ಅವರಿಗೆ ನಮಸ್ಕರಿಸುತ್ತೇನೆ" ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
"ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಂಪೂರ್ಣ ಏಕತೆಯನ್ನು ಪ್ರದರ್ಶಿಸುವ ಮೂಲಕ ಭಾರಿ ಬಹುಮತವನ್ನು ಸಾಧಿಸಿದೆ. ಈ ಬೃಹತ್ ಗೆಲುವಿಗೆ, ಎನ್‌ಡಿಎ ಮೈತ್ರಿಕೂಟದ ಎಲ್ಲಾ ಪಾಲುದಾರರಾದ ಚಿರಾಗ್ ಪಾಸ್ವಾನ್, ಜಿತನ್ ರಾಮ್ ಮಾಂಝಿ ಮತ್ತು ಉಪೇಂದ್ರ ಕುಶ್ವಾಹ ಅವರಿಗೆ ಧನ್ಯವಾದಗಳು ಮತ್ತು ಕೃತಜ್ಞತೆಗಳು" ಎಂದು ಅವರು ಹೇಳಿದ್ದಾರೆ.
"ನಿಮ್ಮೆಲ್ಲರ ಬೆಂಬಲದೊಂದಿಗೆ, ಬಿಹಾರ ಇನ್ನಷ್ಟು ಪ್ರಗತಿ ಸಾಧಿಸುತ್ತದೆ ಮತ್ತು ದೇಶದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯಗಳ ವರ್ಗಕ್ಕೆ ಸೇರುತ್ತದೆ" ಎಂದು ನಿತೀಶ್ X ನಲ್ಲಿ ಬರೆದಿದ್ದಾರೆ.
ಒಂದು ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರಲ್ಲಿ ಮುಂಚೂಣಿಯಲ್ಲಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಕಾಲಕ್ರಮದಲ್ಲಿ ಹಲವು ಬಾರಿ ಮೋದಿ ನೇತೃತ್ವದ ಬಿಜೆಪಿ ಜೊತೆ ಕೈ ಜೋಡಿಸಿ, ಮೈತ್ರಿಯನ್ನೂ ಮುರಿದುಕೊಂಡಿದ್ದರು. ಆದರೆ 2024 ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಜೊತೆ ಕೈ ಜೋಡಿಸಿದ ಬಳಿಕ ಪ್ರಧಾನಿ ಮೋದಿ ಅವರ ವಿಷಯದಲ್ಲಿ ನಿತೀಶ್ ಕುಮಾರ್ ಸಂಪೂರ್ಣ ಬದಲಾದಂತೆ ತೋರುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಹಲವು ಸಂದರ್ಭಗಳಲ್ಲಿ ನಿತೀಶ್ ಕುಮಾರ್ ಮೋದಿ ಅವರೆಡೆಗೆ ವಿಶೇಷ ಆದರವನ್ನು ವ್ಯಕ್ತಪಡಿಸಿದ್ದಾರೆ. 3 ನೇ ಬಾರಿಗೆ ಪ್ರಧಾನಿ ಮೋದಿ ಪದಗ್ರಹಣಕ್ಕೂ ಮೊದಲು ಸಂಸತ್ ನಲ್ಲಿ ನಡೆದ ಎನ್ ಡಿಎ ಕಾರ್ಯಕ್ರಮದಲ್ಲಿ ಮೋದಿ ಕಾಲಿಗೆರಗಿ ನಿತೀಶ್ ಕುಮಾರ್ ಅಚ್ಚರಿ ಮೂಡಿಸಿದ್ದರು. ಇದಾದ ಬಳಿಕ ಹಲವು ಕಾರ್ಯಕ್ರಮದಲ್ಲಿ ಮೋದಿ ಎದುರು ಕೈ ಜೋಡಿಸಿದ್ದರು. ಈಗ ಬಿಹಾರ ಚುನಾವಣೆ ನಂತರ ಮೋದಿಗೆ ನಮಸ್ಕರಿಸಿ ಕೃತಜ್ಞತೆ ಸಲ್ಲಿಸುವುದಾಗಿ ನಿತೀಶ್ ಹೇಳಿರುವುದು ಮತ್ತೊಮ್ಮೆ ಅಚ್ಚರಿ ಮೂಡಿಸಿದೆ.
2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯ ಅದ್ಭುತ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ " ಇದು ಉತ್ತಮ ಆಡಳಿತ, ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ಗೆಲುವು" ಎಂದು ಬಣ್ಣಿಸಿದ್ದಾರೆ ಮತ್ತು ರಾಜ್ಯದ ಪ್ರಗತಿಗಾಗಿ ನವೀಕೃತ ಹುರುಪಿನಿಂದ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ."
Advertisement