

ನವದೆಹಲಿ: ದೆಹಲಿ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA), ಪಶ್ಚಿಮ ಬಂಗಾಳದ ಅಲ್ ಫಲಾಹ್ ವಿಶ್ವವಿದ್ಯಾಲಯದ ಯುವ ವೈದ್ಯರೊಬ್ಬರನ್ನು ಬಂಧಿಸಿದೆ.
ಫರಿದಾಬಾದ್ ವಿಶ್ವವಿದ್ಯಾಲಯದಿಂದ 2024ರಲ್ಲಿ ಎಂಬಿಬಿಎಸ್ ಪದವಿ ಪಡೆದ ಝನಿಶಾರ್ ಆಲಂ ಎಂಬ ವೈದ್ಯರನ್ನು ಎನ್ಐಎ ಶುಕ್ರವಾರ ಬಂಧಿಸಿದೆ.
ಎನ್ಐಎ, ದೆಹಲಿ ಪೊಲೀಸರೊಂದಿಗೆ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ದಲ್ಖೋಲಾ ಪ್ರದೇಶದ ಸೂರ್ಯಾಪುರ್ ಮಾರುಕಟ್ಟೆಯಲ್ಲಿ ಝನಿಶಾರ್ ಆಲಂನನ್ನು ಬಂಧಿಸಿದೆ.
ಮದುವೆ ಸಮಾರಂಭದಲ್ಲಿ ಭಾಗವಹಿಸಲು ನವೆಂಬರ್ 12 ರಂದು ತನ್ನ ಸ್ಥಳೀಯ ಕೋನಾಲ್ ಗ್ರಾಮಕ್ಕೆ ಬಂದಿದ್ದ ಝನಿಶಾರ್ ಅವರನ್ನು ವಿಚಾರಣೆಗಾಗಿ ಸಿಲಿಗುರಿಗೆ ಕರೆದೊಯ್ಯಲಾಗಿದೆ. ಬಂಧಿತ ವೈದ್ಯ ಮತ್ತು ಅವರ ತಂದೆ ತೌಹಿದ್ ಆಲಂ ಲುಧಿಯಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ NIA ಅಧಿಕಾರಿಗಳು, ಮೊದಲು ಲುಧಿಯಾನದಲ್ಲಿರುವ ತೌಹಿದ್ ಅವರನ್ನು ಸಂಪರ್ಕಿಸಿ ಅವರ ಮಗನ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು. ನಂತರ ತೌಹಿದ್‌ನಿಂದ ಝನಿಶಾರ್ ಇರುವ ಸ್ಥಳದ ಬಗ್ಗೆ ತಿಳಿದುಕೊಂಡರು ಮತ್ತು ನಂತರ ದಲ್ಖೋಲಾಕ್ಕೆ ಧಾವಿಸಿದರು ಎಂದು ಮೂಲಗಳು ತಿಳಿಸಿವೆ.
ಝನಿಶಾರ್ ಅವರನ್ನು ಪ್ರಾಮಾಣಿಕ, ಸಭ್ಯ ಮತ್ತು ಮೃದು ಸ್ವಭಾವದವರೆಂದು ಗ್ರಾಮಸ್ಥರು ಹೇಳಿದ್ದಾರೆ. ಆದರೆ ಸ್ಫೋಟಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿದ್ದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ದೆಹಲಿ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ NIA ಈಗಾಗಲೇ ಅದೇ ವಿಶ್ವವಿದ್ಯಾಲಯದ ನಾಲ್ವರು ವೈದ್ಯರನ್ನು ಬಂಧಿಸಿದೆ.
ಏತನ್ಮಧ್ಯೆ, ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ನಿಯಂತ್ರಿಸುವ ಉನ್ನತ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗವು ಮಹಿಳಾ ವೈದ್ಯೆ ಸಹೀನ್ ಸಾಹಿದಿ ಸೇರಿದಂತೆ ನಾಲ್ವರು ಆರೋಪಿ ವೈದ್ಯರ ನೋಂದಣಿಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
Advertisement