

ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ನೌಗಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರೂ. 10 ಲಕ್ಷ ರೂ. ಪರಿಹಾರವನ್ನು ಅಲ್ಲಿನ ಸರ್ಕಾರ ಶನಿವಾರ ಘೋಷಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು. ತೀವ್ರವಾಗಿ ಗಾಯಗೊಂಡವರಿಗೆ ತಲಾ ರೂ. 1 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಒಗ್ಗಟ್ಟಿನ ಮತ್ತು ತಕ್ಷಣದ ನೆರವಿನ ಸಂಕೇತವಾಗಿ, ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬ ಸದಸ್ಯರಿಗೆ ರೂ. 10 ಲಕ್ಷ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ರೂ. 1 ಲಕ್ಷ ಪರಿಹಾರವನ್ನು ಘೋಷಿಸಿದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಆರೋಗ್ಯ ಸಚಿವೆ ಸಕಿನಾ ಇಟೂ ಅವರು ಆಕಸ್ಮಿಕ ಸ್ಫೋಟದಲ್ಲಿ ಮೃತಪಟ್ಟವರ ಕೆಲ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಬಳಿಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವಿಚಾರಿಸಿದ್ದು,ಈ ದುಃಖದ ಸಮಯದಲ್ಲಿ ಸರ್ಕಾರ ಸಂತ್ರಸ್ತ ಕುಟುಂಬಗಳೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿರುವುದಾಗಿ ಅಬ್ದುಲ್ಲಾ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಶ್ರೀನಗರದ ನೌಗಮ್ ಪೊಲೀಸ್ ಠಾಣೆಯಲ್ಲಿ "ಆಕಸ್ಮಿಕ" ಸ್ಫೋಟ ಸಂಭವಿಸಿ ಒಂಬತ್ತು ಜನರು ಮೃತಪಟ್ಟಿದ್ದು, 32 ಜನರು ಗಾಯಗೊಂಡಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಭಯೋತ್ಪಾದಕ ದಾಳಿಯಲ್ಲ ಎಂದಿದ್ದಾರೆ.
ಶುಕ್ರವಾರ ತಡರಾತ್ರಿ ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಫರೀದಾಬಾದ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದಲ್ಲಿ ವಶಪಡಿಸಿಕೊಂಡ ಸ್ಫೋಟಕಗಳ ಸಂಗ್ರಹದಿಂದ ಮಾದರಿಗಳನ್ನು ಅಧಿಕಾರಿಗಳು ಹೊರತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement