

ಬಿಹಾರ ಚುನಾವಣಾ ಫಲಿತಾಂಶದಿಂದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಉತ್ಸುಕರಾಗಿದ್ದಾರೆ. ಚಿರಾಗ್ ಪಕ್ಷವಾದ ಎಲ್‌ಜೆಪಿ (ರಾಮ್ ವಿಲಾಸ್) ಶಾಸಕರು ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದರು. ತಮ್ಮ ಪಕ್ಷವು ನಿತೀಶ್ ಕುಮಾರ್ ಸರ್ಕಾರ ಸೇರಲು ಉತ್ಸುಕವಾಗಿದೆ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಉಳಿಯಬೇಕೆಂದು ಅವರು ವೈಯಕ್ತಿಕವಾಗಿ ಬಯಸುತ್ತಾರೆ ಎಂದು ಚಿರಾಗ್ ಸ್ಪಷ್ಟಪಡಿಸಿದ್ದಾರೆ.
ಚಿರಾಗ್ ಪಾಸ್ವಾನ್ ಅವರ ಪಕ್ಷವು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಸ್ಥಾನಗಳನ್ನು ಗೆದ್ದಿದೆ. ಗೆಲುವಿನ ಒಂದು ದಿನದ ನಂತರ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಚಿರಾಗ್ ಪಾಸ್ವಾನ್, ಬಿಹಾರದ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ತಮಗೆ ಉತ್ತಮ ಸಂಬಂಧವಿಲ್ಲ ಎಂಬ 'ಸುಳ್ಳುಗಳನ್ನು' ವಿರೋಧ ಪಕ್ಷವು ಹರಡುತ್ತಿತ್ತು ಎಂದು ಆರೋಪಿಸಿದರು.
ಹೊಸ ಸರ್ಕಾರ ಸೇರುವ ಬಯಕೆ ವ್ಯಕ್ತಪಡಿಸಿದ ಚಿರಾಗ್
ಚಿರಾಗ್ ಪಾಸ್ವಾನ್ ಹೊಸ ಸರ್ಕಾರ ಸೇರಲು ಉತ್ಸುಕರಾಗಿರುವುದಾಗಿ ಹೇಳಿದರು. ಈ ಹಿಂದೆ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ ಎಂದು ಹೇಳುತ್ತಿದ್ದೆವು, ಆದರೆ ಅದರ ಭಾಗವಾಗಿರಲಿಲ್ಲ. ರಾಜ್ಯ ವಿಧಾನಸಭೆಯಲ್ಲಿ ನಮಗೆ ಯಾವುದೇ ಪ್ರಾತಿನಿಧ್ಯವಿಲ್ಲದ ಕಾರಣ ಸಾಧ್ಯವಾಗಿರಲಿಲ್ಲ ಎಂದರು. ಇನ್ನು ಮುಂದಿನ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಯಾರಾಗಬೇಕೆಂದು ನಿರ್ಧರಿಸುವುದು ಶಾಸಕರ ಜವಾಬ್ದಾರಿ. ನಿತೀಶ್ ಕುಮಾರ್ ಸರ್ಕಾರವನ್ನು ಮುನ್ನಡೆಸುವುದನ್ನು ನಾನು ವೈಯಕ್ತಿಕವಾಗಿ ನಂಬುತ್ತೇನೆ ಎಂದು ಹೇಳಿದರು.
2020ರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನು ಎದುರಾಳಿ ಎಂದು ನಾವು ಪರಿಗಣಿಸಿದ್ದೇವು. ಹೀಗಾಗಿ ಅದು ಆರ್‌ಜೆಡಿಗೆ ಲಾಭ ಮಾಡಿಕೊಟ್ಟಿದ್ದು ಅಲ್ಲದೆ ಅದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲು ಸಾಧ್ಯವಾಯಿತು ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಆದಾಗ್ಯೂ, ಸಾರ್ವಜನಿಕರು ತಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಭಾವಿಸಿ ಆರ್‌ಜೆಡಿ ದುರಹಂಕಾರಿಯಾಯಿತು ಎಂದು ಅವರು ಹೇಳಿದರು. ಪಕ್ಷವು ಈ ದುರಹಂಕಾರಕ್ಕೆ ಬಲಿಯಾಯಿತು.
ಬಿಹಾರದ ಜನರು ಬಹಳ ಹಿಂದೆಯೇ ಆರ್‌ಜೆಡಿ ಮತ್ತು ಅದರ ಜಂಗಲ್ ರಾಜ್ ಅನ್ನು ತಿರಸ್ಕರಿಸಿತ್ತು. 2010ರಲ್ಲಿ ಆರ್ ಜೆಡಿ ನಾಶವಾಯಿತು. ಆದರೆ 2015ರಲ್ಲಿ ಮತ್ತೆ ಆರ್ ಜೆಡಿ ಉತ್ತಮ ಪ್ರದರ್ಶನ ನೀಡಿತ್ತು. ಏಕೆಂದರೆ ನಿತೀಶ್ ಕುಮಾರ್ ಅವರೊಂದಿಗೆ ಸೇರಿಕೊಂಡಿದ್ದರು. ಇನ್ನು 2020ರಲ್ಲಿ ನಾವು NDAಯ ಭಾಗವಾಗಿಲ್ಲದ ಕಾರಣ ಅದು ಪ್ರಯೋಜನ ಪಡೆಯಿತು ಎಂದು ಪಾಸ್ವಾನ್ ಹೇಳಿದ್ದಾರೆ.
Advertisement