

ನವದೆಹಲಿ: ಮಖಾನಾ ಮಂಡಳಿ ಸ್ಥಾಪಿಸುವ ಘೋಷಣೆ ಮತ್ತು ಅದರ ಉತ್ಪಾದನೆಗೆ ಗಣನೀಯ ಸಬ್ಸಿಡಿ ಭರವಸೆ ಬಿಹಾರ ಚುನಾವಣೆಯಲ್ಲಿ ಆಡಳಿತರೂಢ ಎನ್‌ಡಿಎನ ಭರ್ಜರಿ ಗೆಲುವಿಗೆ ಸಹಕಾರಿಯಾಗಿದೆ.
ಈ ಉಪಕ್ರಮದ ಪ್ರಯೋಜನಗಳನ್ನು ಒತ್ತಿಹೇಳುವ ಮೂಲಕ, ಎನ್‌ಡಿಎ ಮುಜಾಫರ್‌ಪುರ, ವೈಶಾಲಿ, ದರ್ಭಂಗಾ, ಮಧುಬನಿ, ಸುಪೌಲ್, ಸಮಸ್ತಿಪುರ, ಪೂರ್ಣಿಯಾ, ಸಹರ್ಸಾ, ಖಗಾರಿಯಾ ಮತ್ತು ಸುಪೌಲ್ ಜಿಲ್ಲೆಗಳನ್ನು ಒಳಗೊಂಡಿರುವ 'ಮಖಾನಾ' ಬೆಳೆಯುವ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣವನ್ನು ಧೂಳಿಪಟ ಮಾಡಿದೆ.
ಈ ಪ್ರದೇಶವು ಮಖಾನಾ ಉತ್ಪಾದನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಮೀನುಗಾರ ಸಮುದಾಯದ ಐದು ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ನೆಲೆಯಾಗಿದೆ ಮತ್ತು ಅವರು ಎನ್‌ಡಿಎಯನ್ನು ಅಗಾಧವಾಗಿ ಬೆಂಬಲಿಸಿದ್ದಾರೆ.
2023ರ ಬಿಹಾರ ಜಾತಿ ಆಧಾರಿತ ಜನಗಣತಿಯ ಪ್ರಕಾರ, ಮಲ್ಲಾ ಸಮುದಾಯ(ಮೀನುಗಾರರು/ದೋಣಿಗಾರರು, ಇದನ್ನು ನಿಶಾದ್ ಎಂದೂ ಕರೆಯುತ್ತಾರೆ) ಬಿಹಾರದ ಜನಸಂಖ್ಯೆಯ ಶೇ. 2.6 ರಷ್ಟಿದೆ. ಬಿಹಾರದ ಒಟ್ಟು ಜನಸಂಖ್ಯೆಯು ಸರಿಸುಮಾರು 13.07 ಕೋಟಿ(130.7 ಮಿಲಿಯನ್) ಆಗಿರುವುದರಿಂದ, ಇದು ಸುಮಾರು 3.4 ಮಿಲಿಯನ್ ಜನರಿಗೆ ಅನ್ವಯಿಸುತ್ತದೆ.
ಕುತೂಹಲಕಾರಿಯಾಗಿ, ಮೀನುಗಾರ ಸಮುದಾಯವನ್ನು ಪ್ರತಿನಿಧಿಸುವ ಮತ್ತು ವಿರೋಧ ಪಕ್ಷದ ಮೈತ್ರಿಕೂಟ INDIAಗೆ ಸೇರಿದ ವಿಕಾಸಶೀಲ್ ಇನ್ಸಾನ್ ಪಕ್ಷ(VIP) ಅವರ ಮತಗಳನ್ನು ಗಳಿಸುವಲ್ಲಿ ವಿಫಲವಾಗಿದೆ.
2025-26 ರ ಆರ್ಥಿಕ ವರ್ಷಕ್ಕೆ 475 ಕೋಟಿ ರೂ.ಗಳ ಬಜೆಟ್ ಪ್ಯಾಕೇಜ್‌ನೊಂದಿಗೆ ರಾಷ್ಟ್ರೀಯ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ, ಆದರೂ ಅದನ್ನು ಇನ್ನೂ ಸ್ಥಾಪಿಸಲಾಗಿಲ್ಲ. ದೇಶದ ಒಟ್ಟು ಮಖಾನಾ ಉತ್ಪಾದನೆಯಲ್ಲಿ ರಾಜ್ಯವು ಶೇ. 90 ರಷ್ಟು ಕೊಡುಗೆ ನೀಡುತ್ತದೆ. ಹೆಚ್ಚುವರಿಯಾಗಿ, ಬಿಹಾರ ಸರ್ಕಾರವು ಶೇ. 75 ರಷ್ಟು ಸಬ್ಸಿಡಿಯೊಂದಿಗೆ ಸುಧಾರಿತ ಮಖಾನಾ ಪ್ರಭೇದಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿರುವ ಬೀಜ ಯೋಜನೆಯನ್ನು(2025–27) ಪ್ರಾರಂಭಿಸಿದೆ.
Advertisement