

ನವದೆಹಲಿ: ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿಯ ಬದಲು ಸಚಿವ ಸಂಪುಟ ಪುನಾರಚನೆ ಬಗ್ಗೆ ಈಗ ತೀವ್ರ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿದ್ದಾರೆ.
ದೆಹಲಿಯಲ್ಲಿ 'ದಿಲ್ ಸೇ ವಿತ್ ಕಪಿಲ್ ಸಿಬಲ್' ನ 100 ನೇ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ನಿನ್ನೆ ಭಾಗಿಯಾಗಿದ್ದರು. ಈ ಮಧ್ಯೆ ನಿನ್ನೆ ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಬಹಳ ಹೊತ್ತು ಚರ್ಚಿಸಿದ್ದಾರೆ. ಹೊರಗೆ ಬಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ ಸಿಎಂ, ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚೆಯೇ ಆಗಿಲ್ಲ, ಬಿಹಾರ ಎಲೆಕ್ಷನ್ ಫಲಿತಾಂಶ ಬಗ್ಗೆ ಮಾತ್ರ ಚರ್ಚೆ ಮಾಡಿದೆವು ಎಂದಿದ್ದಾರೆ.
ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯನವರ ಭೇಟಿ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ವಿಚಾರಕ್ಕೆ ಭೇಟಿಯಾಗಿದ್ದರು, ಏನು ಚರ್ಚೆ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ, ಅವರನ್ನೇ ಕೇಳಿ ಎಂದಿದ್ದಾರೆ.
ಸಾಮಾನ್ಯವಾಗಿ ಸಿಎಂ ಬಂದಾಗ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಹಜ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಏನೂ ಗೊತ್ತಿಲ್ಲ, ಏನಾದರೂ ಇದ್ದರೆ ಸಿಎಂ ಹತ್ತಿರ ಮಾತನಾಡಿ. ಪಕ್ಷ ಏನು ಹೇಳುತ್ತೋ ಹಾಗೆ ನಡೆದುಕೊಳ್ಳುವುದು ನನ್ನ ಕೆಲಸ. ಪಕ್ಷದ ಹೈಕಮಾಂಡ್ ನನ್ನ ಕೇಳ್ತಾರೆ, ಆಗ ನಾನು ಮಾತನಾಡುತ್ತೇನೆ. ಏನು ಮಾತಾಡಬೇಕೆಂದು ನನಗೆ ಗೊತ್ತು ಎಂದು ದೆಹಲಿಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಹೈಕಮಾಂಡ್ ಅವರನ್ನು ಸಿಎಂ ಭೇಟಿ ಮಾಡಿದರೆ ತಪ್ಪೇನು, ಅವರು ಯಾರನ್ನೂ ಬೇಕಾದರೆ ಭೇಟಿ ಮಾಡುವ ಅಧಿಕಾರ ಅವರಿಗಿದೆ, ನಾನು ಭೇಟಿ ಮಾಡಿದರೆ ಏನು ಕೇಳುತ್ತಾರೆ ಎಂದು ನನಗೆ ಗೊತ್ತಿದೆ, ಅದಕ್ಕೆ ನಾನು ಉತ್ತರ ಕೊಡುತ್ತೇನೆ ಎಂದಷ್ಟೇ ಹೇಳಿದರು.
Advertisement