

ಪಾಟ್ನ: ಬಿಹಾರದ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಹೀನಾಯ ಸೋಲು ಕಂಡ ಆರ್ ಜೆಡಿ ಪಕ್ಷದ ನಾಯಕರ ಕುಟುಂಬದಲ್ಲೂ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಕುಟುಂಬದ ಪುತ್ರಿ ರೋಹಿಣಿ ಆಚಾರ್ಯ ಸಹೋದರ ತೇಜಸ್ವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಈಗಾಗಲೇ ಕುಟುಂಬದಿಂದ ದೂರ ಆಗಿರುವ ತೇಜ್ ಪ್ರತಾಪ್ ಯಾದವ್ ಸಹೋದರಿ ರೋಹಿಣಿ ಆಚಾರ್ಯಗೆ ಉಂಟಾಗಿರುವ ಅಪಮಾನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮದೇ ಪಕ್ಷ ಜನಶಕ್ತಿ ಜನತಾ ದಳದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ತೇಜ್ ಪ್ರತಾಪ್ ಯಾದವ್ ನೆನ್ನೆಯ ಘಟನೆ ಜಂಘಾಬಲವನ್ನು ಉಡುಗಿಸಿದೆ. ನನಗೆ ಆಗಿದ್ದನ್ನು ನಾನು ಹೇಗೋ ಎದುರಿಸಿದ್ದೇನೆ. ಆದರೆ ನನ್ನ ಸಹೋದರಿಗೆ ಆದ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ದ್ರೋಹಿಗಳೇ ಕೇಳಿ ನೀವು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿದರೆ ಬಿಹಾರದ ಜನತೆ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಯಾರನ್ನೂ ಹೆಸರಿಸದೇ ಎಚ್ಚರಿಕೆ ನೀಡಿರುವ ತೇಜ್ ಪ್ರತಾಪ್ ಯಾದವ್, ಕೆಲವು ಮಂದಿ ನನ್ನ ಸಹೋದರ ತೇಜಸ್ವಿ ಯಾದವ್ ಅವರ ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಈ ಅನ್ಯಾಯದ ಪರಿಣಾಮಗಳು ತೀವ್ರವಾಗಿರುತ್ತವೆ ಎಂದು ಕಠಿಣ ಶಬ್ದಗಳಲ್ಲಿ ತೇಜ್ ಪ್ರತಾಪ್ ಯಾದವ್ ಎಚ್ಚರಿಕೆ ನೀಡಿದ್ದಾರೆ.
ಇದೇ ಪೋಸ್ಟ್ ಮೂಲಕ ತೇಜ್ ಪ್ರತಾಪ್ ಯಾದವ್ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ಮುಖ್ಯವಾದ ಮನವಿಯೊಂದನ್ನು ಮಾಡಿದ್ದಾರೆ. ಅಪ್ಪಾ, ನೀವು ನಮಗೆ ಒಂದೇ ಒಂದು ಸೂಚನೆ ಕೊಡಿ. ಬಿಹಾರದ ಜನತೆ ಈ ದ್ರೋಹಿಗಳನ್ನು ಹೂತುಹಾಕುತ್ತಾರೆ. ಇದು ಯಾವುದೇ ರಾಜಕೀಯ ಪಕ್ಷದ ಹೋರಾಟವಲ್ಲ. ಇದು ಕುಟುಂಬದ ಗೌರವಕ್ಕಾಗಿ ನಡೆಯುತ್ತಿರುವ ಹೋರಾಟ, ಕುಟುಂಬದ ಹೆಣ್ಣುಮಗಳ ಘನತೆಯ ಪ್ರಶ್ನೆ, ಬಿಹಾರದ ಆತ್ಮಾಭಿಮಾನದ ಪ್ರಶ್ನೆನ್ ಎಂದು ತೇಜ್ ಪ್ರತಾಪ್ ಯಾದವ್ ತಿಳಿಸಿದ್ದಾರೆ.
ತೇಜ್ ಪ್ರತಾಪ್ ಯಾದವ್ ತಮ್ಮ ವೈಯಕ್ತಿಕ ಜೀವನದ ವಿವಾದದಿಂದಾಗಿ ಆರ್ ಜೆಡಿ ಹಾಗೂ ಕುಟುಂಬದಿಂದ ದೂರವಾಗಿದ್ದರು. ಈಗ ಕುಟುಂಬದಲ್ಲಿನ ಅಹಿತಕರ, ನಿಂದನೆಗಳಿಂದ ಬೇಸತ್ತು ಕುಟುಂಬ, ರಾಜಕೀಯ ತೊರೆಯುತ್ತಿರುವುದಾಗಿ ಲಾಲು ಪುತ್ರಿ ರೋಹಿಣಿ ಆಚಾರ್ಯ ಹೇಳಿದ್ದಾರೆ.
Advertisement