

ಪಾಟ್ನಾ: ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ರಾಜಕೀಯ ತ್ಯಜಿಸುವ ಮತ್ತು ಕುಟುಂಬದೊಂದಿಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರವನ್ನು ಘೋಷಿಸಿದ ಒಂದು ದಿನದ ನಂತರ ಕುಟುಂಬದೊಳಗಿನ ಪ್ರಕ್ಷುಬ್ಧತೆ ತೀವ್ರಗೊಂಡಿದೆ..
ರೋಹಿಣಿ ಅವರು ಮನೆ ತೊರೆದ ನಂತರ ಅವರ ಸಹೋದರಿಯರಾದ ರಾಜಲಕ್ಷ್ಮಿ, ರಾಗಿಣಿ, ಮತ್ತು ಚಂದಾ ತಮ್ಮ ಮಕ್ಕಳೊಂದಿಗೆ ಪಾಟ್ನಾದ ಕುಟುಂಬ ನಿವಾಸವನ್ನು ತೊರೆದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಲಾಲು ಪ್ರಸಾದ್ ಪುತ್ರಿ ರೋಹಿಣಿ ಆಚಾರ್ಯ ಅವರು ಪಾಟ್ನಾದಲ್ಲಿರುವ ಲಾಲು ಯಾದವ್ ಅವರ ನಿವಾಸ ತೊರೆಯುತ್ತಿರುವ ಬಗ್ಗೆ ಮತ್ತು ರಾಜಕೀಯವನ್ನು ತ್ಯಜಿಸಿ, ತಮ್ಮ ಕುಟುಂಬದಿಂದ ದೂರವಾಗುತ್ತಿರುವ ಬಗ್ಗೆ ಬಹಿರಂಗವಾಗಿ ಕೊಟ್ಟಿರುವ ಹೇಳಿಕೆ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅವರ ಈ ನಡೆ ಬೆನ್ನಲ್ಲೇ ಮೂವರು ಸಹೋದರಿಯರು ಕುಟುಂಬದಿಂದ ದೂರಾಗಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಜನಶಕ್ತಿ ಜನತಾ ದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್ ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಘಟನೆಯು ಹೃದಯವನ್ನು ಕಲಕಿದೆ. ನನ್ನ ಮೇಲಿನ ಅನೇಕ ದಾಳಿಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ನನ್ನ ಸಹೋದರಿಗೆ ಮಾಡಿದ ಅವಮಾನ ಯಾವುದೇ ಸಂದರ್ಭದಲ್ಲೂ ಸಹಿಸಲ್ಲ. ಈ ಅನ್ಯಾಯದ ಪರಿಣಾಮಗಳು ಗಂಭೀರವಾಗಿರುತ್ತವೆ. ಕುಟುಂಬದ ಗೌರವಕ್ಕಾಗಿ ನನ್ನ ತಂದೆ ಮಧ್ಯಪ್ರವೇಶಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ಕುಟುಂಬದ ಭಿನ್ನಾಭಿಪ್ರಾಯಕ್ಕೆ ಹಾಗೂ ರೋಹಿಣಿ ಅವರ ಆರೋಪಗಳಿಗೆ ತೇಜಸ್ವಿ ಅಥವಾ ಅವರ ಸಲಹೆಗಾರ, ಆರ್‌ಜೆಡಿ ಸಂಸದ ಸಂಜಯ್ ಯಾದವ್ ಪ್ರತಿಕ್ರಿಯಿಸಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಸರನ್‌ನಿಂದ ಸ್ಪರ್ಧಿಸಿದ್ದ ರೋಹಿಣಿ, ಸಂಜಯ್ ಯಾದವ್ ಹಾಗೂ ಸಹಚರ ರಮೀಜ್ ಅವರಿಂದ ಕಿರುಕುಳ ಮತ್ತು ಬೆದರಿಕೆ ಅನುಭವಿಸಿದ್ದಾಗಿ ಆರೋಪಿಸಿದರು.
ರಾಜಲಕ್ಷ್ಮಿ, ರಾಗಿಣಿ ಮತ್ತು ಚಂದಾ ನಿರ್ಗಮನದೊಂದಿಗೆ, ಒಂದು ಕಾಲದಲ್ಲಿ ಆರ್‌ಜೆಡಿಯ ರಾಜಕೀಯದ ಕೇಂದ್ರವಾಗಿದ್ದ ಕುಟುಂಬದ ಮನೆಯಲ್ಲಿ ಲಾಲು, ರಾಬ್ರಿ ದೇವಿ ಮತ್ತು ಮಿಸಾ ಭಾರ್ತಿ ಮಾತ್ರ ಉಳಿದಿದ್ದಾರೆ.
ಇಂದು ಆರ್‌ಜೆಡಿ ಪರಿಶೀಲನಾ ಸಭೆ
ಆರ್‌ಜೆಡಿ ತನ್ನ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಲು ಸೋಮವಾರ ತನ್ನ ಹೊಸದಾಗಿ ಆಯ್ಕೆಯಾದ ಶಾಸಕರು ಮತ್ತು ಹಿರಿಯ ನಾಯಕರ ಸಭೆಯನ್ನು ಕರೆದಿದೆ. "ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ನಾಯಕರು ಚರ್ಚಿಸುತ್ತಾರೆ" ಎಂದು ಆರ್‌ಜೆಡಿಯ ಚಿತ್ರಂಜನ ಗಗನ್ ಹೇಳಿದರು.
Advertisement