

ಚಂಡೀಗಢ: ಈ ವರ್ಷ ಇಲ್ಲಿಯವರೆಗೆ ಹೆರಾಯಿನ್ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಪಾಕಿಸ್ತಾನದಿಂದ ಬಂದ 255 ಡ್ರೋನ್‌ಗಳನ್ನು ಬಿಎಸ್‌ಎಫ್ ತಟಸ್ಥಗೊಳಿಸಿದೆ ಎಂದು ಪಂಜಾಬ್ ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬರುವ ಚಳಿಗಾಲದ ಋತುವಿನ ಹಿನ್ನೆಲೆಯಲ್ಲಿ ಗಡಿಯಾಚೆಯಿಂದ ಕಳ್ಳಸಾಗಣೆ ಚಟುವಟಿಕೆಗಳನ್ನು ಪರಿಶೀಲಿಸಲು ಬಿಎಸ್‌ಎಫ್ ಕಣ್ಗಾವಲು ಬಲಪಡಿಸಿದೆ ಎಂದು ಅವರು ಹೇಳಿದ್ದಾರೆ.
ಸೋಮವಾರ ಅಮೃತಸರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ಅತುಲ್ ಫುಲ್ಜೆಲೆ, ಫಾಗ್ ಋತುವಿನಲ್ಲಿ ಗೋಚರತೆ ಕಡಿಮೆಯಾಗುತ್ತದೆ. ಡ್ರೋನ್‌ಗಳನ್ನು ಬಳಸುವ ಕಳ್ಳಸಾಗಣೆದಾರರು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಉಲ್ಲೇಖಿಸಿದ್ದಾರೆ.
"ಈ ಸಮಸ್ಯೆಯನ್ನು ಪರಿಹರಿಸಲು ನಾವು ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದೇವೆ. ಮಂಜಿನ ಪರಿಸ್ಥಿತಿಗಳಲ್ಲಿ ವಿಶೇಷ ಕಣ್ಗಾವಲು ಉಪಕರಣಗಳನ್ನು ಬಳಸಿಕೊಳ್ಳಲಾಗುವುದು ಮತ್ತು ನದಿ ಪ್ರದೇಶಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮಾಡುತ್ತೇವೆ. ನಮ್ಮ ಒಟ್ಟಾರೆ ಕಣ್ಗಾವಲು ಗ್ರಿಡ್ ಅನ್ನು ಬಲಪಡಿಸುತ್ತೇವೆ" ಎಂದು ಫುಲ್ಜೆಲೆ ತಿಳಿಸಿದ್ದಾರೆ.
ಗಡಿಯಾಚೆಯಿಂದ ಡ್ರೋನ್ ಡ್ರಾಪ್-ಆಫ್‌ಗಳನ್ನು ಹಿಂಪಡೆಯಲು ಗಡಿ ಪ್ರದೇಶಗಳ ಬಳಿ ತೆರಳುವ ವ್ಯಕ್ತಿಗಳ ಮೇಲೆ ಬಿಎಸ್‌ಎಫ್ ಸಿಬ್ಬಂದಿ ನಿಗಾ ಇಡುತ್ತಾರೆ ಎಂದು ಅವರು ಹೇಳಿದ್ದಾರೆ.
ಕಳ್ಳಸಾಗಣೆ ತಡೆಗಟ್ಟಲು ಗಡಿ ಪ್ರದೇಶಗಳಿಗೆ ಹೋಗುವ ರಸ್ತೆಗಳಲ್ಲಿ ಬಿಎಸ್‌ಎಫ್ ಪಡೆಗಳು ಮತ್ತು ಪಂಜಾಬ್ ಪೊಲೀಸರು ಜಂಟಿ ತಪಾಸಣೆ ನಡೆಸುತ್ತಾರೆ. "ನಾವು ಇದನ್ನು ಪ್ರತಿ ವರ್ಷ ಮಾಡುತ್ತೇವೆ ಮತ್ತು ಈ ಬಾರಿಯೂ ಮಾಡುತ್ತಿದ್ದೇವೆ" ಎಂದು ಐಜಿ ತಿಳಿಸಿದ್ದಾರೆ.
"ಇಲ್ಲಿಯವರೆಗೆ, ಬಿಎಸ್‌ಎಫ್ ಪಾಕಿಸ್ತಾನದಿಂದ ಬರುವ 255 ಡ್ರೋನ್‌ಗಳನ್ನು ತಟಸ್ಥಗೊಳಿಸಿದೆ" ಎಂದು ಅವರು ಹೇಳಿದ್ದಾರೆ.
Advertisement