

ನವದೆಹಲಿ: ಬಹು ದಿನಗಳಿಂದ ಮಾನಸಿಕವಾಗಿ ಕಾಂಗ್ರೆಸ್ ನಿಂದ ದೂರ ಉಳಿದಿರುವ ಸಂಸದ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಮೂಲಕ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, ಕಳೆದ ರಾತ್ರಿ ಇಂಡಿಯನ್ ಎಕ್ಸ್ ಪ್ರೆಸ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ರಾಮನಾಥ ಗೋಯೆಂಕಾ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದೆ. ಅಲ್ಲಿ ಪ್ರಧಾನಿ "ಅಭಿವೃದ್ಧಿಗೆ ಭಾರತದ ರಚನಾತ್ಮಕ ಅಸಹನೆ ಮತ್ತು ವಸಾಹತುಶಾಹಿ ನಂತರದ ಮನಸ್ಥಿತಿಯ ಕುರಿತು ಮಾತನಾಡಿದರು. ಭಾರತ ಇನ್ನು ಮುಂದೆ ಕೇವಲ 'ಉದಯೋನ್ಮುಖ ಮಾರುಕಟ್ಟೆ' ಅಲ್ಲ, ಆದರೆ ಜಗತ್ತಿಗೆ 'ಉದಯೋನ್ಮುಖ ಮಾದರಿ' ಎಂದು ಪ್ರಧಾನಿ ಒತ್ತಿ ಹೇಳಿದರು.
ಎಲ್ಲಾ ಸಂದರ್ಭದಲ್ಲೂ ಚುನಾವಣಾ ಮನಸ್ಥಿತಿಯಲ್ಲಿರುತ್ತಾರೆ ಎಂಬುದು ಸಾಮಾನ್ಯವಾಗಿ ನನ್ನ ವಿರುದ್ಧದ ಆರೋಪವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಆದರೆ ಅವರು ನಿಜವಾಗಿಯೂ ಜನರ ಸಮಸ್ಯೆಗಳನ್ನು ಪರಿಹರಿಸಲು 'ಭಾವನಾತ್ಮಕ ಮನಸ್ಥಿತಿ'ಯಲ್ಲಿರುತ್ತಾರೆ ಎಂದು ಶಶಿ ತರೂರ್ ಹೇಳಿದ್ದಾರೆ.
ಭಾರತದಲ್ಲಿ ಶಿಕ್ಷಣದ ಮೇಲೆ ವಸಾಹತುಶಾಹಿಯ ಪ್ರಭಾವದ ಮೇಲೆ ಪ್ರಧಾನಿ ಭಾಷಣ ಕೇಂದ್ರಿಕೃತವಾಗಿತ್ತು. ಭಾಷಣದ ಹೆಚ್ಚಿನ ಭಾಗವು ಮೆಕಾಲೆ ಅವರ 200 ವರ್ಷಗಳ "ಗುಲಾಮ ಮನಸ್ಥಿತಿ"ಯ ಪರಂಪರೆಯನ್ನು ಉರುಳಿಸಲು ಮೀಸಲಾಗಿತ್ತು. ಭಾರತದ ಪರಂಪರೆ, ಭಾಷೆಗಳು ಮತ್ತು ಜ್ಞಾನ ವ್ಯವಸ್ಥೆಗಳಲ್ಲಿ ಹೆಮ್ಮೆಯನ್ನು ಪುನರ್ ಸಾಧಿಸಲು 10 ವರ್ಷಗಳ ರಾಷ್ಟ್ರೀಯ ಧ್ಯೇಯಕ್ಕಾಗಿ ಪ್ರಧಾನಿ ಮೋದಿ ಮನವಿ ಮಾಡಿದರು ಎಂದು ಶಶಿ ತರೂರ್ ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ, ಪ್ರಧಾನ ಮಂತ್ರಿಯವರ ಭಾಷಣವು ಆರ್ಥಿಕ ದೃಷ್ಟಿಕೋನ ಮತ್ತು ಸಂಸ್ಕೃತಿ ರಕ್ಷಣೆಗೆ ಕರೆಯಾಗಿತ್ತು. ದೇಶದ ಪ್ರಗತಿಯಾಗಿ ಹಗಲಿರುಳು ಶ್ರಮಿಸುವಂತೆ ಕರೆ ನೀಡಿದರು. ತೀವ್ರ ಶೀತ ಇದ್ದರೂ ಪ್ರಧಾನಿ ಮೋದಿ ಅವರ ಭಾಷಣವನ್ನು ಪ್ರೇಕ್ಷಕರು ಸಂತೋಷದಿಂದ ಕೇಳಿದರು ಎಂದು ತರೂರ್ ಹೇಳಿದ್ದಾರೆ. ವೇದಿಕೆಯಲ್ಲಿ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಎಡಭಾಗದಲ್ಲಿ ಶಶಿ ತರೂರ್ ಕುಳಿತಿರುವ ವಿಡಿಯೋಗಳು ವೈರಲ್ ಆಗಿವೆ.
ಅಂದಹಾಗೆ, ಶಶಿ ತರೂರು ಹೀಗೆ ಪ್ರಧಾನಿಯನ್ನು ಹೊಗಳಿ ಮಾತನಾಡಿರುವುದು ಇದೇ ಮೊದಲೇನಲ್ಲಾ. ಈ ಹಿಂದೆ ಹಲವು ಬಾರಿ ಪ್ರಧಾನಿ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಏಫ್ರಿಲ್ 14ರ ಪಹಲ್ಗಾಮ್ ದಾಳಿ ನಂತರ ವಿದೇಶಕ್ಕೆ ತೆರಳಿದ ನಿಯೋಗದಲ್ಲಿ ಶಶಿ ತರೂರ್ ಕಾಣಿಸಿಕೊಂಡ ನಂತರ ಕಾಂಗ್ರೆಸ್ ಹಾಗೂ ಅವರ ನಡುವಿನ ಸಂಬಂಧ ಬಹಳಷ್ಟು ಹದಗೆಟ್ಟಿದ್ದು, ಶಶಿ ತರೂರ್ ಬಿಜೆಪಿ ಸೇರ್ಪಡೆಯಾಗ್ತಾರಾ ಎನ್ನುವ ಚರ್ಚೆಗಳು ಕೂಡಾ ನಡೆಯುತ್ತಿವೆ.
Advertisement