

ನವದೆಹಲಿ/ಪಾಟ್ನಾ: ಬಿಹಾರದಲ್ಲಿ ಅಸ್ಥಿತ್ವಕ್ಕೆ ಬರಲಿರುವ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಎನ್ ಡಿಎ ಮಿತ್ರಪಕ್ಷಗಳ ನಡುವೆ ಉತ್ತಮ ಖಾತೆಗಳ ಕುರಿತು ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಸ್ಪೀಕರ್ ಹುದ್ದೆ ಬಿಜೆಪಿಯ ಬಳಿಯೇ ಉಳಿಯುವ ನಿರೀಕ್ಷೆಯಿದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಗೃಹ ಸಚಿವ ಸ್ಥಾನ ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಸ್ಪೀಕರ್ ಸ್ಥಾನಕ್ಕೆ ಇಬ್ಬರು ಪ್ರಮುಖ ಬಿಜೆಪಿ ನಾಯಕರ ಹೆಸರುಗಳನ್ನು ಈಗಾಗಲೇ ಪರಿಗಣಿಸಲಾಗಿದ್ದು, ಅವರಲ್ಲಿ ಒಬ್ಬರನ್ನು ಇಂದು ಪಾಟ್ನಾದಲ್ಲಿ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಚಿರಾಗ್ ಪಾಸ್ವಾನ್ ಅವರ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ಈ ಹಿಂದೆ ಊಹಿಸಲಾಗಿತ್ತು. ಆದರೆ ಈಗ ಬಿಜೆಪಿ ಎರಡೂ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ತನ್ನದಾಗಿಸಿಕೊಳ್ಳುವ ಸಾಧ್ಯತೆ ಇದೆ. ಆ ಸ್ಥಾನಕ್ಕೆ ಹೊಸ ಮುಖಗಳನ್ನು ನೇಮಿಸುವ ಬಗ್ಗೆ ಪಕ್ಷವು ಪರಿಗಣಿಸುತ್ತಿದೆ. ಆರಂಭದಲ್ಲಿ, ಜೆಡಿಯು ಸ್ಪೀಕರ್ ಹುದ್ದೆಯನ್ನು ಬಯಸಿತ್ತು. ಆದಾಗ್ಯೂ, ಅದು ಮಣಿದು ನಂತರ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗಯಾ ಟೌನ್‌ನಿಂದ ಎಂಟು ಬಾರಿ ಬಿಜೆಪಿ ಶಾಸಕರಾಗಿರುವ ಪ್ರೇಮ್ ಕುಮಾರ್ ಸ್ಪೀಕರ್ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳಲ್ಲಿ ಆರ್‌ಎಸ್‌ಎಸ್ ಬೆಂಬಲ ಹೊಂದಿರುವ ಮತ್ತು ನಿರ್ಗಮಿತ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದ ಮಂಗಲ್ ಪಾಂಡೆ ಮತ್ತು ಸಂಜೀವ್ ಚೌರಾಸಿಯಾ ಅಥವಾ ವಿಜಯ್ ಕುಮಾರ್ ಸಿನ್ಹಾ ಸೇರಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಜೆಡಿ(ಯು) ನಾಯಕರು ನಡೆಸಿದ ಮೂರು ಗಂಟೆಗಳ ಸಭೆಯ ನಂತರ, ಸಚಿವ ಸ್ಥಾನಗಳಿಗೆ ಸೂತ್ರವನ್ನು ತಾತ್ವಿಕವಾಗಿ ಒಪ್ಪಲಾಯಿತು. ಸಿಎಂ ಹೊರತುಪಡಿಸಿ, ಸಚಿವಾಲಯದಲ್ಲಿ ಬಿಜೆಪಿಯಿಂದ 16, ಜೆಡಿ(ಯು) ನಿಂದ 14, ಚಿರಾಗ್ ಅವರ ಎಲ್‌ಜೆಪಿ(ಆರ್‌ವಿ) ಯಿಂದ ಮೂವರು ಮತ್ತು ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾದಿಂದ ತಲಾ ಒಬ್ಬರು ಇರುತ್ತಾರೆ.
ನವೆಂಬರ್ 20ರಂದು 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ
ನಾಳೆ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ಅದಕ್ಕೂ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಇಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗುವುದು.
ನಾಳೆಯ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಲು ನಿತೀಶ್ ಕುಮಾರ್ ಗಾಂಧಿ ಮೈದಾನಕ್ಕೆ ಭೇಟಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರು ನಾಳೆ ಭಾಗವಹಿಸುವ ನಿರೀಕ್ಷೆಯಿದೆ.
ಇಂದು ನಿತೀಶ್ ರಾಜೀನಾಮೆ ನೀಡಲಿದ್ದಾರೆ
ದಾಖಲೆಯ 10ನೇ ಬಾರಿಗೆ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್ ಇಂದು ಬೆಳಗ್ಗೆ 11 ಗಂಟೆಗೆ ಜನತಾದಳ-ಸಂಯುಕ್ತ ಶಾಸಕಾಂಗ ಪಕ್ಷದ ನಾಯಕರಾಗಿ ಮೊದಲು ಆಯ್ಕೆಯಾಗಲಿದ್ದಾರೆ. ನಂತರ ಮಧ್ಯಾಹ್ನ 3.30 ಕ್ಕೆ ಎನ್‌ಡಿಎ ನಾಯಕರಾಗಿ ಆಯ್ಕೆಯಾಗಲಿದ್ದಾರೆ, ನಂತರ ನಿರ್ಗಮಿತ ಸರ್ಕಾರದ ಮುಖ್ಯಸ್ಥರಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೊಸ ಸರ್ಕಾರ ರಚನೆಗಾಗಿ ಅವರು ಎನ್‌ಡಿಎಯ ಎಲ್ಲಾ ಮೈತ್ರಿಕೂಟದ ಪಾಲುದಾರರಿಂದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ.
ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಸಿಎಂ ಜೊತೆಗೆ ಇತರ ಹಲವಾರು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement