

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ ತಮ್ಮ ನಿರ್ಧಾರ "ತಪ್ಪು" ಎಂದಿರುವ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು, ತಮ್ಮ ಪಕ್ಷವು ಶೇಕಡಾ 4 ಕ್ಕಿಂತ ಕಡಿಮೆ ಮತಗಳನ್ನು ಪಡೆಯುತ್ತದೆ ಎಂದು ತಾವು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜನ್ ಸುರಾಜ್ ಪಕ್ಷ ಸೋಲು ಅನುಭವಿಸಿದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, "ಚುನಾವಣೆಯಲ್ಲಿ ಸ್ಪರ್ಧಿಸದಿರುವ ನನ್ನ ನಿರ್ಧಾರ ತಪ್ಪು ಎಂದು ಪರಿಗಣಿಸಬಹುದು. ತೃಪ್ತಿದಾಯಕ ಫಲಿತಾಂಶ ಪಡೆಯಲು ನಾವು ಇನ್ನೂ ಬಹಳಷ್ಟು ಕೆಲಸ ಮಾಡಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಶೇಕಡಾ 4 ಕ್ಕಿಂತ ಕಡಿಮೆ ಮತ ಪಡೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ" ಎಂದು ಕಿಶೋರ್ ಹೇಳಿದ್ದಾರೆ.
ಭವಿಷ್ಯದ ಚುನಾವಣೆಗಳಲ್ಲಿ ಗೆಲ್ಲಲು ತಮ್ಮ ಪ್ರಯತ್ನ ಮುಂದುವರಿಯುತ್ತದೆ ಎಂದು ಮಾಜಿ ಚುನಾವಣಾ ತಂತ್ರಜ್ಞ ಹೇಳಿದ್ದು, "ಬಿಹಾರವನ್ನು ಗೆಲ್ಲದೆ ನಾನು ಹಿಂದೆ ಸರಿಯುವುದಿಲ್ಲ. ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನನಗೆ ಗೊತ್ತಿಲ್ಲ" ಎಂದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸರ್ಕಾರವು ವಿಧಾನಸಭಾ ಚುನಾವಣೆಗೂ ಮುನ್ನ ಪ್ರತಿ ಕ್ಷೇತ್ರದ 60,000 ಕ್ಕೂ ಹೆಚ್ಚು ಫಲಾನುಭವಿಗಳಿಗೆ 10,000 ರೂ.ಗಳನ್ನು ನೀಡದಿದ್ದರೆ ಅವರ ಜೆಡಿಯು ಕೇವಲ 25 ಸ್ಥಾನಗಳಿಗೆ ಸೀಮಿತವಾಗುತ್ತಿತ್ತು ಎಂದು ಪ್ರಶಾಂತ್ ಕಿಶೋರ್ ನಿನ್ನೆ ಹೇಳಿದ್ದರು.
ಎನ್‌ಡಿಎ ಸರ್ಕಾರವು ಜನರ ಹಣದಿಂದ 40,000 ಕೋಟಿ ರೂ.ಗಳನ್ನು ನೀಡುವ ಭರವಸೆ ನೀಡಿತ್ತು ಮತ್ತು ಚುನಾವಣೆಗೆ ಸ್ವಲ್ಪ ಮೊದಲು ಅದರಲ್ಲಿ ಹೆಚ್ಚಿನ ಭಾಗವನ್ನು ಬಿಡುಗಡೆ ಮಾಡಿತ್ತು ಎಂದು ಅವರು ಆರೋಪಿಸಿದ್ದರು.
Advertisement