

ಇಂಫಾಲ್: ಎರಡು ವರ್ಷಗಳ ಹಿಂದೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮೊದಲ ಬಾರಿಗೆ ಮಣಿಪುರಕ್ಕೆ ಆಗಮಿಸಲಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಭಾಗವತ್ ಅವರು ನವೆಂಬರ್ 20 ರಿಂದ ಮೂರು ದಿನ ಮಣಿಪುರ ಪ್ರವಾಸದ ಸಮಯದಲ್ಲಿ ನಾಗರಿಕರು, ಉದ್ಯಮಿಗಳು ಮತ್ತು ಬುಡಕಟ್ಟು ಸಮುದಾಯದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಆರ್‌ಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ತರುಣ್‌ಕುಮಾರ್ ಶರ್ಮಾ ಅವರು ಪಿಟಿಐಗೆ ತಿಳಿಸಿದ್ದಾರೆ.
"ನಮ್ಮ ಸರಸಂಘಚಾಲಕ್ ಅವರ ರಾಜ್ಯ ಭೇಟಿ ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಗೆ ಸಂಬಂಧಿಸಿದೆ. ಅವರು ನವೆಂಬರ್ 20 ರಂದು ಗುವಾಹಟಿಯಿಂದ ಆಗಮಿಸುತ್ತಿದ್ದಾರೆ ಮತ್ತು ನವೆಂಬರ್ 22 ರಂದು ಹೊರಡಲಿದ್ದಾರೆ" ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಹಿಂಸಾಚಾರ ಭುಗಿಲೆದ್ದ ನಂತರ ಭಾಗವತ್ ಅವರ ಮೊದಲ ಭೇಟಿ ಇದಾಗಿದೆ. ಅವರು ಕೊನೆಯದಾಗಿ 2022ರಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದರು ಎಂದು ಮತ್ತೊಬ್ಬ ಆರ್‌ಎಸ್‌ಎಸ್ ಪದಾಧಿಕಾರಿ ಹೇಳಿದ್ದಾರೆ.
ಭಾಗವತ್ ಅವರು ಪ್ರಮುಖ ನಾಗರಿಕರು, ಬುಡಕಟ್ಟು ಸಮುದಾಯದ ಪ್ರತಿನಿಧಿಗಳು ಮತ್ತು ಯುವ ನಾಯಕರೊಂದಿಗೆ ಪ್ರತ್ಯೇಕ ಸಂವಾದ ನಡೆಸಲಿದ್ದಾರೆ ಎಂದು ಶರ್ಮಾ ತಿಳಿಸಿದ್ದಾರೆ.
"ಅವರು ನಾಳೆ ಇಂಫಾಲ್‌ನ ಕೊಂಜೆಂಗ್ ಲೈಕೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉದ್ಯಮಿಗಳು ಮತ್ತು ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ. ನವೆಂಬರ್ 21 ರಂದು, ಮಣಿಪುರ ಬೆಟ್ಟಗಳ ಬುಡಕಟ್ಟು ನಾಯಕರನ್ನು ಭಾಗವತ್ ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮೇ 2023 ರಿಂದ ಮೈತೈಸ್ ಮತ್ತು ಕುಕಿ-ಜೋ ಗುಂಪುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
Advertisement