

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಬಿಜೆಪಿ ಹೈಕಮಾಂಡ್ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದಾಗಿ ಬಿಜೆಪಿ ರಾಜ್ಯಾಕ್ಷರನ್ನು ಬದಲಾವಣೆ ಮಾಡಲಾಗಿತ್ತು. ಅಣ್ಣಾಮಲೈ ಅವರ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಲಾಗಿತ್ತು.
ಈ ಬದಲಾವಣೆಗಳ ನಂತರ ತಮಿಳುನಾಡು ಬಿಜೆಪಿಯಲ್ಲಿ ಗೊಂದಲಗಳು ಉಂಟಾಗಿತ್ತು. ಹಣೆಗೆ ಗನ್ ಹಿಡಿದು ಪಕ್ಷದಲ್ಲಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಇತ್ತೀಚೆಗಷ್ಟೇ ಅಣ್ಣಾಮಲೈ ಮಾರ್ಮಿಕವಾಗಿ ನುಡಿದಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಂತರ ತಮಿಳುನಾಡು ಬಿಜೆಪಿಯೊಳಗೆ ಸಂಭಾವ್ಯ ನಾಯಕತ್ವ ಬದಲಾವಣೆಯ ಬಗ್ಗೆ ಮತ್ತೊಮ್ಮೆ ಊಹಾಪೋಹಗಳು ಹೊರಹೊಮ್ಮಿವೆ. ಪಕ್ಷ ಪ್ರಸ್ತುತ ನೈನಾರ್ ನಾಗೇಂದ್ರನ್ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಜಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ಅವರು ಮತ್ತೆ ರಾಜ್ಯಾಧ್ಯಕ್ಷರ ಹುದ್ದೆಗೆ ಮರಳಬಹುದು ಎಂಬ ಸುದ್ದಿಗಳಿವೆ.
ನೈನಾರ್ ಪಕ್ಷದ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿನ ಎಲ್ಲಾ ಪ್ರಸ್ತುತ ಸುದ್ದಿಗಳನ್ನು ಅಣ್ಣಾಮಲೈ ಅವರ ಅಭಿಮಾನಿಗಳು ಹರಡುತ್ತಿದ್ದಾರೆ ಎಂದು ನೈನಾರ್ ಬೆಂಬಲಿಗರು ಹೇಳಿದ್ದಾರೆ.
ಈಗ ಚುನಾವಣೆ ಸಮೀಪಿಸುತ್ತಿದ್ದು ನೈನಾರ್ ಮತ್ತು ಅಣ್ಣಾಮಲೈ ನಡುವಿನ ಉದ್ವಿಗ್ನತೆಯನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
Advertisement